ಫಲಿತಾಂಶಕ್ಕೆ ಮುನ್ನವೇ ಸಿಎಂ ಖುರ್ಚಿ ಮೇಲೆ ಕಣ್ಣು? ಖರ್ಗೆಯನ್ನು ಭೇಟಿಯಾದ ಡಿಕೆಶಿ
ಕರ್ನಾಟಕ ವಿಧಾನಸವಾ ಚುನಾವಣೆ ಫಲಿತಾಂಶ ಪ್ರಕಟವಾಗಲು ಇನ್ನೂ ಒಂದು ದಿನ ಬಾಕಿ ಇರುವುಂತೆಯೇ ಕಾಂಗ್ರೆಸ್‌ನಲ್ಲಿ ರಾಜಕೀಯ ಲೆಕ್ಕಾಚಾರಗಳು ಹೆಚ್ಚಾಗಿವೆ. ಈ ಬಾರಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ ಎನ್ನುವ ವಿಶ್ವಾಸದಲ್ಲಿದ್ದು ಈಗಾಗಲೇ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದ್ಯಾ ಎನ್ನುವ ಅನುಮಾನ ಮೂಡುತ್ತಿದೆ.
ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಜೊತೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಭೇಟಿಗೆ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಅಧ್ಯಕ್ಷನಾಗಿ ನಿದ್ದೆ ಕೂಡ ಮಾಡಿಲ್ಲ" ಎಂದು ಹೇಳಿದರು.

ಚುನಾವಣೋತ್ತರ ಸಮೀಕ್ಷೆ ಮೇಲೆ ನನಗೆ ನಂಬಿಕೆ ನನ್ನ ಸಂಖ್ಯೆ 146. ಕಾಂಗ್ರೆಸ್ ಪರವಾಗಿ ದೊಡ್ಡ ಅಲೆ ಇದೆ. ಮೊದಲು ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತದೆ ಎಂದವರು ನಂತರ ಕಡಿಮೆ ಸಂಖ್ಯೆ ತೋರಿಸಿದರು ಎಂದು ಹೇಳಿದ್ದಾರೆ.
"ಯಾವ ಕಾರಣಕ್ಕೂ ಸಂಖ್ಯೆ ಕಡಿಮೆಯಾಗಲ್ಲ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ. ಬ್ಯಾಲೆಟ್ ಈಸ್ ಸ್ಟ್ರಾಂಗರ್ ದೆನ್ ಬುಲೆಟ್, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಾಗ ಜನ ಹೇಗೆ ಬುಲೆಟ್‌ಗೆ ಹೆದರಲಿಲ್ಲವೋ ಅದೇ ರೀತಿ ಈ ಬಾರಿ ಆಸೆ ಆಮಿಷಗಳಿಗೆ ಬಲಿಯಾಗಲ್ಲ, ಮೇ 13ರಂದು ಮಧ್ಯಾಹ್ನ 1 ಗಂಟೆಗೆ ತೀರ್ಪು ಹೊರಬರಲಿದೆ" ಎಂದು ಹೇಳಿದರು.
ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಹೇಳಿದ್ದೇನು?
ಅತಂತ್ರ ಫಲಿತಾಂಶದ ಬಂದರೆ ಜೆಡಿಎಸ್ ಮೈತ್ರಿ ಮಾಡ್ಕೊತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಕಾರ್ಯಕರ್ತರಿಗೆ ಧೈರ್ಯ ತುಂಬಲು ಅವರ ಆ ರೀತಿ ಹೇಳಿರಬಹುದು. ನಾನು ಹೋರಾಟ ಮಾಡುವವನು, ಈಗಲೇ ನಿವೃತ್ತಿ ಹೊಂದುವವನಲ್ಲ, ಬಂದು ನನ್ನನ್ನು ಸೇರಿಕೊಳ್ಳಿ ಎಂದು ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಹೇಳುತ್ತೇನೆ ಎಂದರು.
"ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿ, ಎಷ್ಟೇ ಸ್ಥಾನಗಳು ಬಂದರೂ ಸರ್ಕಾರ ಮಾಡುತ್ತೇವೆ ಎಂದು ಹೇಳುತ್ತಾರೆ, ಎಲ್ಲಾ ಪಕ್ಷದವರು ತಮ್ಮ ಶಾಸಕರನ್ನು ಜೋಪಾನ ಮಾಡುತ್ತಾರೆ. ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಮಾಡಿಲ್ಲ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ಹೇಳುತ್ತಾರೋ ಅದನ್ನು ಮಾಡುತ್ತೇವೆ" ಎಂದು ತಿಳಿಸಿದರು.
ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕೆ ರಾಜ್ಯದ 6.5 ಕೋಟಿ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಫಲಿತಾಂಶ ಬರುವವರೆಗೆ ಕಾಯೋಣ, ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್ ಈ ಬಾರಿ ಸರ್ಕಾರ ರಚನೆ ಮಾಡಿ ರಾಜ್ಯದ ಜನರ ಸೇವೆ ಮಾಡಲಿದೆ ಎಂದರು.












Click it and Unblock the Notifications