Namma Metro: ಇಂದು ಹೆಬ್ಬಾಳ 45 ಎಕರೆ ಜಾಗ ಹಸ್ತಾಂತರ ಫೈನಲ್ ಆಗುತ್ತಾ?
ಬೆಂಗಳೂರು, ಮೇ 05: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮಕ್ಕೆ ಅಗತ್ಯವಾಗಿ ಬೇಕಾಗಿರುವ ಹತ್ತಾರು ಎಕರೆ ಜಾಗದ ಕುರಿತು ಮಹತ್ವದ ಸಭೆ ಇಂದು ನಡೆಯಲಿದೆ. ಮೆಟ್ರೋ ನಿಲ್ದಾಣಗಳು ಅಭಿವೃದ್ಧಿ ಸೇರಿದಂತೆ ಬಹುಮಾದರಿ ಸಾರಿಗೆ ಕೇಂದ್ರ ಆಗಲಿರುವ ಹೆಬ್ಬಾಳದ ಜಾಗ ಈ ಬಾರಿಯ ಸಭೆ ಬಳಿಕವಾದರೂ BMRCL ಗೆ ನೀಡಲು ಅನುಮತಿ ದೊರೆಯುತ್ತಾ? ಎಂದು ಕಾದು ನೋಡಬೇಕಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಭೆ ನಮ್ಮ ಮೆಟ್ರೋಗೆ ನಿರ್ಣಾಯಕ ಅಂತಲೂ ಹೇಳಬಹುದು.
ಈ ಹಿಂದೆ ಸಾಕಷ್ಟು ಸಭೆಗಳು ಹೆಬ್ಬಾಳದಲ್ಲಿನ 45 ಎಕರೆ ಜಾಗದ ಕುರಿತು ನಡೆದಿವೆ. ಇತ್ತೀಚೆಗೆ ಮೂಲಸೌಕರ್ಯ ಹಾಗೂ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಆದರೆ ಮಹತ್ವದ ಯಾವ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಇಂದಲ್ಲ ನಾಳೆ ಈ ಭೂಮಿ ಹಸ್ತಾಂತರ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾಯುತ್ತಿದೆ.

ಈ 45 ಎಕರೆ ಭೂಮಿಯ ಭವಿಷ್ಯದ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಉನ್ನತ ಮಟ್ಟದ ಸಭೆ ಜರುಗಲಿದೆ. ಕಳೆದ 08 ತಿಂಗಳಲ್ಲಿ ಇದು ಮೂರನೇ ಸಭೆಯಾಗಿದೆ. ಸಚಿವ ಎಂ.ಬಿ. ಪಾಟೀಲ್ ಹಾಗೂ ಕೈಗಾರಿಕೆ ಇಲಾಖೆ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
KIADB ಸುಪರ್ದಿಯಲ್ಲಿರುವ ಹೆಬ್ಬಾಳದ 45 ಎಕರೆ ಜಾಗದ ಕುರಿತು ಬಿಎಂಆರ್‌ಸಿಎಲ್ ಔಪಚಾರಿಕವಾಗಿ ಭೂಮಿ ನೀಡುವಂತೆ ಮನವಿ ಮಾಡಿಕೊಂಡಿತ್ತು. ಈ ಜಾಗವನ್ನು ಭೂಮಾಲೀಕರಿಂದ ಪಡೆದಿದ್ದು, ಅವರಿಗೆ ಪರಿಹಾರ ನೀಡುವ ಪ್ರಸ್ತಾಪ ಇದೆ. ಆ ಹಣ ಮೆಟ್ರೋ ನೀಡಲು ಅಂತಲೂ ಹಿಂದಿನ ಸಭೆಯಲ್ಲಿ ಮೌಖಿಕವಾಗಿ ಸಚಿವರು ಮಾತನಾಡಿದ್ದರು. ಆದರೆ ಪರಿಹಾರ ವಿತರಣೆಯಲ್ಲಿನ ಈಗಾಗಲೇ ನಡೆದ ವಿಳಂಬ ಹಾಗೂ ಲಿಖಿತ ಪ್ರತಿಕ್ರಿಯೆಗಳು ಸಿಗದ ಹಿನ್ನೆಲೆ ಕೋಟ್ಯಂತರ ರೂಪಾಯಿ ಹಣ ಒದಗಿಸುವುದು ಸರಿಯಲ್ಲ ಎಂದು ಸುಮ್ಮನಾಯಿತು.
ಅಲ್ಲದೇ ಹೆಬ್ಬಾಳದಿಂದ ಸರ್ಜಾಪುರ ವರೆಗೆ ನಮ್ಮ ಮೆಟ್ರೋ ಕೆಂಪು ಮಾರ್ಗ (Namma Metro Red Line Project) ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಭೂಮಿ ಅಗತ್ಯವಿದೆ. ಈ ಸಂಬಂಧ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರು ಸಹ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
2026ಕ್ಕೆ ಭೂಮಿ ಹಸ್ತಾಂತರ ಆಗುತ್ತಾ?
ಸುಮಾರು ಎರಡು ದಶಕಗಳಿಂದ ಭೂಮಾಲೀಕರಿಗೆ ಪರಿಹಾರ ನೀಡುವಲ್ಲಿ KIADB ವಿಫಲವಾಗಿದೆ. ಇಂದಿನ ಮಾರುಕಟ್ಟೆ ಬೆಲೆಯನ್ನು ಭೂಮಾಲೀಕರು ಕೇಳುತ್ತಿದ್ದಾರೆ. ಇದರಿಂದಾಗಿ ಒಂದಷ್ಟು ಕಾನೂನು ತೊಡಕು ಉಂಟಾಗಿದೆ. ಈ ಪರಿಹಾರ ಹಣ ಕೊಡಲು ಬಿಎಂಆರ್‌ಸಿಎಲ್ ಸಹ ಸಿದ್ಧವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಲಿಖಿತ ಯಾವ ಒಪ್ಪಂದ, ಅನುಮತಿಗಳು ಆಗಿಲ್ಲ. ಹೀಗಾಗಿ 45 ಎಕರೆ ಭೂಮಿ ಹಸ್ತಾಂತರ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ.
ಸದ್ಯ ಈ ಜಾಗವನ್ನು ಖಾಸಗಿ ಡೆವಲಪರ್‌ಗೆ ನೀಡಲಾಗಿದ್ದು, 2026 ಮಾರ್ಚ್‌ಗೆ ಭೂಮಿ ಒಪ್ಪಂದ ಪೂರ್ಣಗೊಳ್ಳಲಿದೆ. ಭೂಮಿ ನೀಡಿದಲ್ಲಿ ಪ್ರತಿ ಎಕೆರೆಗೆ 12.10 ಕೋಟಿ ರೂ.ಗಳನ್ನು ಪಾವತಿಸಲು ನಮ್ಮ ಮೆಟ್ರೋ ಸಿದ್ಧವಾಘಿದೆ. ಈ ಮೂಲ ಕೊಟ್ಟು ಭೂಮಿಗೆ ಒಟ್ಟು 551.15 ಕೋಟಿ ರೂ.ಗಳ ಪರಿಹಾರ ನೀಡಬೇಕಾಗುತ್ತದೆ.












Click it and Unblock the Notifications