ನಿರುದ್ಯೋಗಕ್ಕೆ ಕಾರಣವೇನು? ಡಿಕೆ ಶಿವಕುಮಾರ್ ಪ್ರಶ್ನೆಗೆ ಜನರ ಉತ್ತರ ಹೀಗಿದೆ
ಬೆಂಗಳೂರು ಏಪ್ರಿಲ್ 11: ಬೆಲೆ ಏರಿಕೆ, ಕೋಮು ವಿಚಾರಗಳು ಪ್ರಭಲವಾಗುತ್ತಿರುವುದರ ಮಧ್ಯೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ವಿಚಾರವೊಂದನ್ನು ಎತ್ತಿಕೊಂಡು ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಏನಿರಬಹುದು? ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 'ಕೂ' ಮಾಡಿದ್ದಾರೆ. ಇದಕ್ಕೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
'ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗದ ಕೊರತೆ. ಉದ್ಯೋಗ ಸಿಕ್ಕರೂ ಸರಿಯಾದ ಸಂಬಳ ಇಲ್ಲ. ಹೀಗಿರುವಾಗ ನಿರುದ್ಯೋಗ ಹೆಚ್ಚಾಗದೆ ಇರುತ್ತದೆಯೇ?' ಎಂದು ಶ್ರೀರಾಮ ಎನ್ನುವವರು ಪ್ರಶ್ನಿಸಿದ್ದಾರೆ.
ಇನ್ನೂ '60 ರಿಂದ 70% ರೆವೆನ್ಯೂ ಮತ್ತು ಉದ್ಯೋಗ ಸೃಷ್ಟಿ ಮಾಡುವ ರಾಜಧಾನಿ ಬೆಂಗಳೂರಿನಲ್ಲಿ ಮುಕ್ಕಾಲು ಭಾಗ ಅನ್ಯರಾಜ್ಯದವರಿದ್ದಾರೆ. ಕೆಲಸ ಪಡೆಯಲು ಬೇರೆ ರಾಜ್ಯಗಳಿಗಿಂತ ಒಬ್ಬ ಕನ್ನಡಿಗ ಸುಮಾರು 5 ಪಟ್ಟು ಸ್ಪರ್ಧೆ ಎದುರಿಸಬೇಕು. BDA, BBMP, REVENUE etc ಸರ್ಕಾರವೂ ಸೇರಿ ಭ್ರಷ್ಟಾಚಾರದಿಂದ ಅನ್ಯರಿಗೆ ಹೆಚ್ಚು ಸವಲತ್ತಿನ ಒತ್ತು ಕೊಡುತ್ತವೆ. ನಿರುದ್ಯೋಗ/ಕನ್ನಡಿಗರ ಅವನತಿಗೆ ನಮ್ಮ ರಾಜ್ಯದ ರಾಜಕೀಯವೇ ಕಾರಣ' ಎನ್ನುತ್ತಾರೆ ಮಂಜುನಾಥ್.

ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಲು ಕಾರಣ 'ಪ್ರತಿಭೆಗೆ ಪೂರಕವಲ್ಲದ ವಾತಾವರಣ, ಹಿಂದಿನಿಂದ ನಡೆದುಬಂದ ಅಧಿಕಾರಿಗಳ ಭ್ರಷ್ಟಾಚಾರ, ಅಭಿವೃದ್ದಿಗೆ ಪೂರಕವಲ್ಲದ ಜನವಿರೋಧಿ ಕಾರ್ಯಕ್ರಮಗಳು, ಚುನಾವಣಾ ಸಮಯಕ್ಕೆ ಸರಿಯಾದವರನ್ನ ಆಯ್ಕೆ ಮಾಡದ ಭ್ರಷ್ಟ ಜನರು, ಅಯೋಗ್ಯ ರಾಜಕಾರಣಿಗಳು, ಹೊರ ದೇಶಗಳು ಅಭಿವೃದ್ದಿ ಕುಂಠಿತಗೊಳಿಸಲು ಮಾಡುವ ಪ್ರಯತ್ನಗಳು' ಎಂದು ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಎಲ್ಲವು ಆಟೊಮೇಷನ್ ಆಗಿರುವ ಕಾರಣ ಯಂತ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ. ಅದಕ್ಕೆ ಮನುಷ್ಯರ ಅಗತ್ಯತೆ ಕಡಿಮೆಯಾಗಿರುವುದರಿಂದ ನಿರುದ್ಯೋಗ ಸಮಸ್ಯೆಯಾಗಿದೆ' ಎಂದು ಮೇಘಶ್ರೀ ಪ್ರತಿಕ್ರಿಯಿಸಿದ್ದಾರೆ. 'ಬಿಜೆಪಿ ಸರ್ಕಾರದ ನೀತಿಗಳು ಕರ್ನಾಟಕದಲ್ಲಿ ಅಲ್ಲ ಭಾರತದಾದ್ಯಂತ ನಿರುದ್ಯೋಗಕ್ಕೆ ಮೂಲ ಕಾರಣ' ಎನ್ನುತ್ತಾರೆ ಅಮರ್.

ರಾಜ್ಯದಲ್ಲಿ ಕೊರೊನಾ ಬಳಿಕ ನಿರುದ್ಯೋಗಿಗಳ ಸಂಖ್ಯೆ ಹೇರಳವಾಗಿದೆ. ದಿನದಿಂದ ದಿನಕ್ಕೆ ಕೋಮು ಗಲಭೆ, ಸಂಘರ್ಷ ಹೆಚ್ಚಾಗುತ್ತಿದ್ದು ರಾಜ್ಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯವವರೇ ಇಲ್ಲದಂತಾಗಿದ್ದಾರೆ. ಇದಕ್ಕೆ ಕಾರಣ ತಿಳಿದರೂ ಬುದ್ಧ ಜೀವಿಗಳು ಕೈಕಟ್ಟಿ ಕುಳಿತಿದ್ದಾರೆ. ಒಂದು ವೇಳೆ ಈ ಅನ್ಯಾಯದ ವಿರುದ್ಧ ಹೋರಾಡುವವರನ್ನು ಅನೇಕ ಸಮಸ್ಯೆಗಳಿಗೆ ಸಿಲುಕಿ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಸದ್ಯದ ಪರಿಸ್ಥಿಯನ್ನು ಅರಿತು ಮೂಕವಿಸ್ಮಿತರಾಗುವುದಕ್ಕಿಂತ ರಾಜ್ಯವನ್ನು ಸರಿದಾರಿಗೆ ತರುವತ್ತ ಯೋಚಿಸಬೇಕಿದೆ. ಇಲ್ಲವಾದಲ್ಲಿ ರಾಜ್ಯದ ಜನರ ಆರ್ಥಿಕ ಪರಿಸ್ಥಿತಿ ಶ್ರೀಲಂಕಕ್ಕೆ ಹೋಲಿಕೆಯಾದರೂ ಆಶ್ಚರ್ಯಪಡಬೇಕಿಲ್ಲ.












Click it and Unblock the Notifications