"ಮೊದಲು ಯಾವ ಸ್ಥಿತಿಯಲ್ಲಿದ್ರು ಅನ್ನೋದನ್ನ ಮರೆತು ಟೀಕೆ ಮಾಡ್ತಿದ್ದಾರೆ"
ಬೆಂಗಳೂರಿನ ರಸ್ತೆ ಗುಂಡಿ, ಕಸದ ಸಮಸ್ಯೆ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಕೂಡ ಮಾಡಿದ್ದರು. ಈ ಪೋಸ್ಟ್‌ಗೆ ಇಬ್ಬರೂ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದರು. ಒಂದು ರೀತಿ ಇದು ವಾಗ್ವಾದದ ಸ್ವರೂಪ ಪಡೆದುಕೊಂಡಿತ್ತು. ಈ ಬಗ್ಗೆ ಡಿಕೆ ಶಿವಕುಮಾರ್ ಇಂದು ಮತ್ತೆ ಮಾತನಾಡಿದ್ದಾರೆ. ಹಿಂದೆ ಹೇಗಿದ್ದರು? ಈಗ ಹೇಗಾಗಿದ್ದಾರೆ ಎಂಬುದನ್ನು ಮರೆತು ಈಗ ಟೀಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇಂದು ನಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಬಹಳಷ್ಟು ಜನರು ಬೆಂಗಳೂರಿನಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿ ಅಗಾಧವಾಗಿ ಬೆಳೆದಿದ್ದಾರೆ. ಆದರೆ ಕೆಲವರು ತಮ್ಮ ಬೇರುಗಳನ್ನು ಮರೆತಿದ್ದಾರೆ. ಇಂದು ಟೀಕಿಸುವುದರಲ್ಲಿ, ಟ್ವೀಟ್ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನೀವು ನಿಮ್ಮ ಬೇರುಗಳನ್ನು ಮರೆತರೆ, ನಿಮಗೆ ಫಲ ಸಿಗುವುದಿಲ್ಲ ಎಂದು ನಾನು ಅವರಿಗೆ ನೆನಪಿಸುತ್ತಲೇ ಇರುತ್ತೇನೆ ಎಂದು ಇತ್ತೀಚೆಗೆ ಬೆಂಗಳೂರು ಮೂಲಸೌಕರ್ಯವನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಆಗುತ್ತಿದೆ. ಇಲ್ಲಿ ಎಲ್ಲರೂ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ಯಾರೆಲ್ಲ ಇಲ್ಲಿ ಉದ್ಯೋಗ ಪ್ರಾರಂಭ ಮಾಡಿದ್ದಾರೋ ಅವರೆಲ್ಲ ಬಹಳ ದೊಡ್ಡ ದೊಡ್ಡದಾಗಿ ಬೆಳೆದಿದ್ದಾರೆ. ಅದರಲ್ಲಿ ಕೆಲವರು ನಾವು ಮೊದಲು ಯಾವ ಹಂತದಲ್ಲಿದ್ವಿ, ಈಗ ಯಾವ ಮಟ್ಟಕ್ಕೆ ಬಂದಿದ್ದೀವಿ ಅನ್ನೋದು ಮರೆತಿದ್ದಾರೆ. ಕೆಲವರೆಲ್ಲ ಟೀಕೆ ಹಾಗೂ ಟ್ವೀಟ್ ಮಾಡ್ತಿದ್ದಾರೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಟೀಕೆಗಳನ್ನ ಸ್ವಾಗತಿಸುವೆ
ಈಗ ನಾಗರಿಕರಿಗೆ ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲೆಲ್ಲಿ ಗುಂಡಿ ಇದೆಯೋ ಅದರ ಫೋಟೋ ತೆಗೆದು ಕಮೀಷನರ್‌ಗೆ ತಿಳಿಸಬಹುದು. ಇದಕ್ಕಾಗಿ ಒಂದು ವಾಟ್ಸಪ್ ನಂಬರ್ ಕೊಟ್ಟಿದ್ದೀವಿ. ಅದನ್ನು ಬಹ:ಳ ಜನ ಈಗಾಗಲೇ ಮಾಡುತ್ತಿದ್ದಾರೆ. ಇಡೀ ದೇಶದಲ್ಲೇ ಈ ರೀತಿ ನಾಗರಿಕರಿಗೆ ಈ ಅವಕಾಶ ನೀಡಿಲ್ಲ. ನಾನು ಎಲ್ಲ ಟೀಕೆಗಳನ್ನು ಸ್ವಾಗತಿಸುತ್ತೇನೆ. ಅದು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಬೆಲೆ ಜಾಸ್ತಿ. ಕೆಲವರು ವಿಕೋಪಕ್ಕೂ ಹೋಗುತ್ತಿದ್ದಾರೆ, ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ನಾವು ನಾಗರಿಕರೊಂದಿಗೆ ಮಾತನಾಡಲು ಮಾತ್ರ ಇಲ್ಲಿದ್ದೇವೆ. ರಾಜಕೀಯ ನಾಯಕರೊಂದಿಗೆ ಮಾತನಾಡಲು ನಾವು ಇಲ್ಲಿಲ್ಲ. ಅದಕ್ಕಾಗಿ ಬೇರೆ ಸ್ಥಳವಿದೆ. ಇದು ಬೆಂಗಳೂರು ನಡಿಗೆಯ ನನ್ನ 4ನೇ ದಿನ ಎಂದಿದ್ದಾರೆ. ನಂತರ ನಾನು ಐಟಿ ಜನರೊಂದಿಗೆ ಮಾತನಾಡಲು ಹೋಗುತ್ತೇನೆ. ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನೀವು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಸಮಸ್ಯೆಯನ್ನು ವ್ಯಕ್ತಪಡಿಸಬಹುದು. ನೀವು ವ್ಯಕ್ತಪಡಿಸುವ ಯಾವುದೇ ಕೋಪವನ್ನು ನಾನು ಸ್ವಾಗತಿಸುತ್ತೇನೆ ಎಂದೂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈಜಿಪುರ ಮೇಲ್ಸೇತುವೆ ಜೂನ್‌ಗೆ ಪೂರ್ಣ
ನಂತರ ಡಿಸಿಎಂ ಈಜಿಪುರ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. 2026ರ ಜೂನ್ ಒಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು, ನಿವಾಸಿಗಳಿಗೆ ಹೆಚ್ಚಿನ ವಿಳಂಬವಿಲ್ಲದೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್ ಶಾ, ಇದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಇದಕ್ಕೆ ಆದ್ಯತೆ ನೀಡಲಿಲ್ಲ. ಕಳೆದ 10 ವರ್ಷಗಳಿಂದ ಎದುರಿಸುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಇದನ್ನು ಆದ್ಯತೆಯ ಹಾದಿಯಲ್ಲಿ ಇಡುವುದು ಒಳ್ಳೆಯ ಕ್ರಮ ಎಂದಿದ್ದಾರೆ.












Click it and Unblock the Notifications