ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್: ಸಾಕ್ಷಿಗಳ ಹೇಳಿಕೆ ಪ್ರತಿ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು, ಜೂ.16. ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಎರಡು ವರ್ಷದ ಹಿಂದೆ ನಡೆದ ಗಲಣೆ ಪ್ರಕರಣದಲ್ಲಿ ಪೊಲೀಸರು ದಾಖಲಿಸಿದ್ದ ಸಾಕ್ಷಿಗಳ ಹೇಳಿಕೆಯ ಪ್ರತಿ ಆರೋಪಿಗಳಿಗೆ ನೀಡುವಂತೆ ಹೈಕೋರ್ಟ್, ರಾಷ್ಟ್ರೀಯ ತನಿಖಾ ದಳಕ್ಕೆ ಆದೇಶಿಸಿದೆ.
"ನ್ಯಾಯಬದ್ದ ವಿಚಾರಣೆ ಅರೋಪಿಗಳ ಹಕ್ಕಾಗಿದ್ದು, ತಮ್ಮನ್ನು ರಕ್ಷಿಸಿಕೊಳ್ಳುವ ಆರೋಪಿಗಳಿಗೆ ಅವಕಾಶ ನೀಡಬೇಕಾಗಿರುವುದರಿಂದ ಎನ್‌ಐಎಗೂ ಮೊದಲು ತನಿಖೆ ನಡೆಸುತ್ತಿದ್ದ ಸ್ಥಳೀಯ ಪೊಲೀಸರು ದಾಖಲಿಸಿದ್ದ ಹೇಳಿಕೆಗಳನ್ನು ಎರಡು ವಾರಗಳಲ್ಲಿ ಒದಗಿಸಬೇಕು'' ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಆರೋಪಿ ಮುಜಮ್ಮಿಲ್ ಪಾಷಾ, ಸಿಆರ್ ಪಿಸಿ ಸೆಕ್ಷನ್ 307ರಡಿ ಆರೋಪಿಗಳ ಹೇಳಿಕೆ ಪ್ರತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನರವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಕೋರ್ಟ್ ಏನು ಹೇಳಿದೆ?
ನ್ಯಾಯಪೀಠ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಅಪರಾಧ ಪ್ರಕರಣ ದಾಖಲಿಸಿಕೊಂಡ ನಂತರ ಅಪರಾಧ ದಂಡ ಸಂಹಿತೆ ಸೆಕ್ಷನ್ 161 ಅಥವಾ 164ರಡಿ ಪೊಲೀಸರು ದಾಖಲಿಸಿಕೊಂಡಿರುವ ಹೇಳಿಕೆಗಳ ಪ್ರತಿ ಸಿಆರ್‌ಪಿಸಿ ಸೆಕ್ಷನ್ 307ರಡಿ ಆರೋಪಿಗಳಿಗೆ ಒದಗಿಸಲೇಬೇಕು ಎಂದು ಹೇಳಿದೆ.
ಅಲ್ಲದೆ, ಕೇಂದ್ರದ ಆದೇಶದಂತೆ ಪ್ರಕರಣದ ತನಿಖೆ ಎನ್ ಐಎಗೆ ವರ್ಗಾವಣೆ ಮಾಡಿರುವುದರಿಂದ ಎಲ್ಲ ದಾಖಲೆಗಳು ಮತ್ತು ಸಾಕ್ಷ್ಯಗಳು ಎನ್ ಐಎ ವಶದಲ್ಲಿವೆ. ಆದರೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 161ರಡಿ ದಾಖಲಿಸಿರುವ ಸಾಕ್ಷಿಗಳ ಹೇಳಿಕೆ ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲೂ ಇಲ್ಲ. ಹಾಗಾಗಿ ಎನ್ ಐಎ ತನಿಖೆ ಕೈಗೆತ್ತಿಕೊಳ್ಳುವ ಮುನ್ನ ದಾಖಲಿಸಿದ್ದ ಹೇಳಿಕೆಗಳ ಪ್ರತಿಯನ್ನು ನ್ಯಾಯಯುತವಾಗಿ ಆರೋಪಿಗಳಿಗೆ ಒದಗಿಸಬೇಕು'' ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ತನಿಖೆಯನ್ನು ಎನ್ ಐಎಗೆ ಹಸ್ತಾಂತರ ಮಾಡುವ ಮೊದಲು ಸ್ಥಳೀಯ ಪೊಲೀಸರು ಹಲವು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ಅವು ಎನ್ ಐಎ ಸಲ್ಲಿಸಿರುವ ಆರೋಪಪಟ್ಟಿಯ ಭಾಗವಾಗಿಲ್ಲ. ಆದರೆ ಆರೋಪಿಗಳಿಗೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಸಾಕ್ಷಿಗಳ ಹೇಳಿಕೆ ಬೇಕಾಗಿದೆ. ಹಾಗಾಗಿ ಅವುಗಳನ್ನು ಒದಗಿಸುವಂತೆ ನಿರ್ದೇಶನ ನೀಡಬೇಕೆಂದರು.
ಎನ್ ಐಎ ಪರ ವಕೀಲರು, ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಎಲ್ಲ ಹೇಳಿಕೆಗಳ ದಾಖಲೆಗಳ ಪ್ರತಿ ಆರೋಪಿಗಳಿಗೆ ಒದಗಿಸಿದೆ. ಆದರೆ ಪೊಲೀಸರು ಮೊದಲೇ ದಾಖಲಿಸಿದ್ದ ಸಾಕ್ಷಿಗಳ ಹೇಳಿಕೆ ಎನ್‌ಎಐ ಅವಲಂಬಿಸಿಲ್ಲ, ಅವು ಆರೋಪಪಟ್ಟಿಯ ಭಾಗವೂ ಅಲ್ಲ. ಆದ್ದರಿಂದ ಆ ಹೇಳಿಕೆಗಳ ಪ್ರತಿ ನೀಡಲಾಗದು, ವಿಚಾರಣೆ ನಂತರ ಕಾನೂನು ಪ್ರಕಾರ ಅವುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ:
Recommended Video
ಅಪರಾಧ ದಂಡ ಸಂಹಿತೆ ಸೆಕ್ಷನ್ 307ರಡಿ ಆರೋಪಿಗಳ ಹೇಳಿಕೆಗಳ ಪ್ರತಿಯನ್ನು ಒದಗಿಸುವಂತೆ ಎನ್ ಐಗೆ ನಿರ್ದೇಶನ ನೀಡಬೇಕೆಂದು ಕೋರಿ ಆರೋಪಿ ಮುಜಮ್ಮಿಲ್ ಪಾಷಾ ಎನ್‌ಐಎ ವಿಶೇಷ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಕೋರ್ಟ್ 2021ರ ಸೆ.27ರಂದು ಆರೋಪಿಗಳ ಅರ್ಜಿ ತಿರಸ್ಕರಿಸಿತ್ತು. ಆ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದ.












Click it and Unblock the Notifications