ಕಿಡ್ಸ್ ಕೆಂಪ್ ಗೆ ಬೀಗ ಮತ್ತು ಇತರ ಜಿಲ್ಲಾ ಸುದ್ದಿಗಳು
ಬೆಂಗಳೂರು, ಅ,22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಕಿಡ್ಸ್ ಕೆಂಪ್ ಕಟ್ಟಡಕ್ಕೆ ಬೀಗ ಜಡಿಯುವಂತೆ ಆದೇಶಿಸಿದೆ. ಕಾನೂನು ಉಲ್ಲಂಘಿಸಿ ಮಳಿಗೆ ನಿರ್ಮಿಸಿರುವ ನಗರದ ಪ್ರಸಿದ್ಧ ಮಂತ್ರಿಮಾಲ್ ಗೂ ನೋಟಿಸ್ ಜಾರಿಗೊಳಿಸಿದೆ. ಈ ಮೂಲಕ ಮತ್ತೊಮ್ಮೆ ಬಹುಮಹಡಿ ಕಟ್ಟಡಗಳ ವಿರುದ್ಧ ಸಮರ ಸಾರಿದೆ.
ಮಂಗಳವಾರ ಬಿಬಿಂಪಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಶಿವಪ್ರಸಾದ್ ಮತ್ತು ಇತರ ಸದಸ್ಯರು ಕೆಂಪೇಗೌಡ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ಮಳಿಗೆ ಮೇಲೆ ದಾಳಿ ನಡೆಸಿದರು. ಆಗ ಕಿಡ್ಸ್ ಕೆಂಪ್ ಕೆಳೆದ ಐದು ವರ್ಷಗಳಿಂದ 2.47 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಆಸ್ತಿ ತೆರಿಗೆ ಪಾವತಿ ಮಾಡುವಂತೆ ಸಮಿತಿ ಸದ್ಯಸರು ಮಳಿಗೆ ಮಾಲೀಕರಿಗೆ ಸೂಚಿಸಿದರು.
ಆದರೆ, ಮನವಿಗೆ ಸ್ಪಂದಿಸದ ಕಿಡ್ಸ್ ಕೆಂಪ್ ಮಳಿಗೆಯವರು ಸಮಿತಿ ಸದಸ್ಯರ ವಿರುದ್ಧ ಮಾತಿನ ಚಕಮಕಿ ನಡೆಸಿದರು. ಇದರಿಂದ ಮಳಿಗೆಗೆ ಬೀಗ ಜಡಿಯುವಂತೆ ಡಾ.ಶಿವಪ್ರಸಾದ್ ಆದೇಶ ನೀಡಿದರು. ಆಸ್ತಿ ತೆರಿಗೆ ದಂಡ ಸೇರಿದಂತೆ ಮಳಿಗೆಯವರು ಸುಮಾರು ಐದು ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿ ಮಾಡಬೇಕಾಗಿತ್ತು. ಇದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ಕಟ್ಟಡಕ್ಕೆ ಒದಗಿಸುತ್ತಿದ್ದ ನೀರು, ವಿದ್ಯುಚ್ಛಕ್ತಿ ಸಂಪರ್ಕವನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿದರು.
ನಗರದ ಪ್ರಸಿದ್ಧ ಮಂತ್ರಿಮಾಲ್ ಮೇಲೂ ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಾಲೀಕರು ತೆರೆದ ಜಾಗದಲ್ಲಿ ಮಳಿಗೆ ನಿರ್ಮಿಸಿರುವುದು ಬೆಳಕಿಗೆ ಬಂದಿತು. ಜತೆಗೆ ಈ ವರ್ಷದ ಎರಡು ಕೋಟಿ ತೆರೆಗೆಯನ್ನು ಸಹ ಪಾವತಿ ಮಾಡಿರಲಿಲ್ಲ. ಆದ್ದರಿಂದ ಮಂತ್ರಿಮಾಲ್ ಗೆ ನೋಟಿಸ್ ಜಾರಿಗೊಳಿಸಲಾಯಿತು. ಮೂರು ದಿನಗಳ ಹಿಂದೆ ಮೆಜೆಸ್ಟಿಕ್ ಬಳಿಯ ಸಿಟಿ ಸೆಂಟರ್ ಹೋಟೆಲ್ ಗೆ ಮೇಯರ್ ಬೀಗ ಜಡಿದಿದ್ದನ್ನು ಇಲ್ಲಿ ಸ್ಮರಿಸಬಹುದು. ( ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕಿಡ್ಸ್ ಕೆಂಪ್ ಗೆ ಬೀಗ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಕಿಡ್ಸ್ ಕೆಂಪ್ ಕಟ್ಟಡಕ್ಕೆ ಬೀಗ ಜಡಿಯುವಂತೆ ಆದೇಶಿಸಿದೆ. ಕಳೆದ ಐದು ವರ್ಷಗಳಿಂದ ಮಳಿಗೆಯವರು ಬಿಬಿಎಂಪಿಗೆ ಆಸ್ತಿತೆರಿಗೆ ಪಾವತಿ ಮಾಡಿರಲಿಲ್ಲ. ಮಂಗಳವಾರ ಮಳಿಗೆ ಮೇಲೆ ದಾಳಿ ನಡೆಸಿದ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಶಿವಪ್ರಸಾದ್ 2.47 ಕೋಟಿ ತೆರಿಗೆ, ದಂಡ ಸೇರಿ ಸುಮಾರು ಐದು ಕೋಟಿ ಪಾವತಿ ಮಾಡಬೇಕಿದ್ದ ಮಳಿಗೆಗೆ ಬೀಗ ಜಡಿಯುವಂತೆ ಆದೇಶ ನೀಡಿದರು. ಕಾನೂನು ಉಲ್ಲಂಘಿಸಿ ಮಳಿಗೆ ನಿರ್ಮಿಸಿರುವ ಮಂತ್ರಿಮಾಲ್ ಗೂ ನೋಟಿಸ್ ಜಾರಿಗೊಳಿಸಿದೆ.

ಖಾಸಗಿ ಬಸ್ ಗಳು ಪೊಲೀಸರ ವಶಕ್ಕೆ
ಖಾಸಗಿ ಬಸ್‌ಗಳಲ್ಲಿ ಕರ್ಕಶ ಶಬ್ದ, ಅಶ್ಲೀಲ ಹಾಡು, ಅಶ್ಲೀಲ ಚಿತ್ರ ಹಾಕುತ್ತಿದ್ದ ಹಾಗೂ ಅನುಮತಿ ಇಲ್ಲದೆ ಸಂಚರಿಸುತ್ತಿದ್ದ 10ಕ್ಕೂ ಹೆಚ್ಚು ಬಸ್ ಗಳನ್ನು ಮಂಗಳವಾರ ತುಮಕೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಖಾಸಗಿ ಬಸ್ ಗಳಲ್ಲಿ ಅಶ್ಲೀಲ ಹಾಡು, ಅಶ್ಲೀಲ ಚಿತ್ರ ಪ್ರದರ್ಶನ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಆದ್ದರಿಂದ ಮಂಗಳವಾರ ಪೊಲೀಸರು ಅಶ್ಲೀಲ ಚಿತ್ರ ಪ್ರದರ್ಶನ ಮಾಡುತ್ತಿದ್ದ ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಮುಕನಿಗೆ ಹಿಗ್ಗಾಮುಗ್ಗಾ ಗೂಸಾ
ಸಾಲವಸೂಲಿ ನೆಪದಲ್ಲಿ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಅಸಾಮಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ದಾವಣಗೆರೆಯ ಶೇಖರಪ್ಪನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಮಮತಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಕೃಷ್ಣಮೂರ್ತಿ 16 ಸಾವಿರ ರುಪಾಯಿ ಸಾಲ ನೀಡಿದ್ದ. ಪುಟ್ಟ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಈ ಮಹಿಳೆಯ ಮನೆಗೆ ಸಾಲ ವಸೂಲಾತಿ ನೆಪದಲ್ಲಿ ಆತ ಆಗಾಗ ಬರುತ್ತಿದ್ದ. ಈ ಸಂದರ್ಭದಲ್ಲಿ ಬಲವಂತವಾಗಿ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಮಹಿಳೆಯ ನಗ್ನ ಚಿತ್ರಗಳನ್ನು ತೆಗೆದು ಬ್ಲಾಕ್'ಮೇಲ್ ಮಾಡಿದ್ದಾನೆ ಎಂಬ ಆರೋಪಗಳಿವೆ. ಇದರಿಂದ ಕೋಪಗೊಂಡ ಸ್ಥಳೀಯರು ಮಂಗಳವಾರ ಕೃಷ್ಣಮೂರ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಲಾಡ್ ಗೆ ಮತ್ತಷ್ಟು ಸಂಕಷ್ಟ
ಬೇಲೇಕೇರಿ ಬಂದರು ಮೂಲಕ ಅದಿರು ರಫ್ತು ಮಾಡಿದ ಆರೋಪ ಎದುರಿಸುತ್ತಿರುವ ವಾರ್ತಾ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಸಂತೋಷ್ ಲಾಡ್ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮತ್ತಷ್ಟು ದಾಖಲೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಚಿವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿರುವ ಬಗ್ಗೆ 126 ಪುಟಗಳ ದಾಖಲೆಗಳನ್ನೊಳಗೊಂಡ ವಿವರಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಸಲ್ಲಿಸುವುದಾಗಿ ತಿಳಿಸಿದರು. ಸಿದ್ದರಾಮಯ್ಯ ಸಂತೋಷ್ ಲಾಡ್ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿಗೆ ಒಂದು ಸಾವಿರ ಕೋಟಿ
ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಮುಖ್ಯರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಾಹನಗಳು ಸಂಚರಿಸದಷ್ಟು ಹಾಳಾಗಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಂಡಿದ್ದು, ಒಂದು ಸಾವಿರ ಕಿ.ಮೀ. ಜಿಲ್ಲಾ ರಸ್ತೆ, 122 ಕಿ.ಮೀ. ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ದೊಡ್ಡಬಳ್ಳಾಪುರದಲ್ಲಿ ನಿಧಿಗಾಗಿ ಶೋಧ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಶೋಧ ನಡೆಸಿದ ಘಟನೆ ನಡೆದಿದೆ. ತಾಲೂಕಿನ ಹೊನ್ನಾವರ ಗ್ರಾಮದ ವೀರಮಾಸ್ತಿ ದೇವಸ್ಥಾನ ಮತ್ತು ಮುಂಭಾಗದಲ್ಲಿರುವ ಇತಿಹಾಸ ಮಂಟಪದಡಿ ದುಷ್ಕರ್ಮಿಗಳು ದೊಡ್ಡ ಹಳ್ಳಗಳನ್ನು ತೋಡಿದ್ದಾರೆ. ವೀರ ಮಾಸ್ತಿ ದೇವರ ಪ್ರತಿಮೆಗಳನ್ನು ಹಾಗೂ ಪಕ್ಕದಲ್ಲೇ ಇರುವ ಹಳೆಯ ಹುತ್ತವನ್ನು ಕೆಡವಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications