ಮತ್ತೆ ‘ನೈಸ್’ ರಣಕಹಳೆ ಮೊಳಗಿಸಿದ ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ 'ನೈಸ್' ವಿರುದ್ಧ ಹೋರಾಟಕ್ಕೆ ಧುಮುಕಿದ್ದು, ರೈತರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ರು. ನೈಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಬೆಂಗಳೂರಿಂದ ಮೈಸೂರಿನವರೆಗೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಭೂಮಿ ವಾಪಸ್ ನೀಡದಿದ್ದರೆ ರಾಜ್ಯಮಟ್ಟದಲ್ಲಿ ಹೋರಾಡುವ ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ ನೈಸ್ ಸಂತ್ರಸ್ತ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ್ದ 'ದುಂಡು ಮೇಜಿನ ಸಭೆ'ಯಲ್ಲಿ ರೈತ ಮುಖಂಡರು ಚರ್ಚೆ ನಡೆಸಿ ಎಚ್‌ಡಿಕೆ ಮಾತನಾಡಿದರು. ಇನ್ನು ಮೂಲ ಒಪ್ಪಂದ ಚೌಕಟ್ಟು ಉಲ್ಲಂಘನೆ ಮಾಡಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಜತೆ ಮಾಡಿಕೊಂಡಿರುವ ನೈಸ್ ಕಂಪನಿಯ ಎಲ್ಲ ಒಪ್ಪಂದ ರದ್ದುಪಡಿಸಬೇಕು ಎಂದು ಎಚ್‌ಡಿಕೆ ಇದೇ ವೇಳೆ ಆಗ್ರಹಿಸಿದರು. ಇದರ ಜೊತೆ ನೈಸ್ ಕಂಪನಿಯ ಬಿಎಂಐಸಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಹೆಚ್ಚಿನ ಪರಿಹಾರಕ್ಕೆ ಎಚ್‌ಡಿಕೆ ಆಗ್ರಹ
ನೈಸ್ ಹಗರಣಕ್ಕೆ ಸಂಬಂಧಿಸಿದ ಸದನ ಸಮಿತಿ ಮತ್ತು ಸಂಪುಟ ಉಪ ಸಮಿತಿ ನೀಡಿದ ವರದಿ ಜಾರಿಗೊಳಿಸಿ. ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಅನ್ವಯ ನಿವೇಶನ ಹಾಗೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಲಾಯಿತು. ಹಾಗೇ ರೈತರ ಬೇಡಿಕೆ ಈಡೇರಿಸದೆ ಇದ್ದರೆ, ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ನೀಡಲಾಯಿತು.
ರೈತ ಸಂಘಟನೆಗಳ ಸಾಥ್
ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ವಿ.ನಾಗರಾಜ್, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಬಸವರಾಜು, ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ದೇವಿ, ಟ್ರೇಡ್ ಯೂನಿಯನ್ ಅಧ್ಯಕ್ಷ ಮೀನಾಕ್ಷಿ ಸುಂದರಂ, ನೈಸ್ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ ಸೇರಿ ಅನೇಕ ಮುಖಂಡರು ಹಾಜರಿದ್ದರು.
ಒಟ್ನಲ್ಲಿ ಮಾಜಿ ಸಿಎಂ ಮತ್ತೆ ನೈಸ್ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಮುಂದಿನ ದಿನದಲ್ಲಿ ರಾಜ್ಯ ಸರ್ಕಾರ & ಕಾಂಗ್ರೆಸ್ ನಾಯಕರು ಈ ಬೇಡಿಕೆ ಹಾಗೂ ಆಗ್ರಹಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications