ದೇವನಹಳ್ಳಿ; ವಜ್ರ, ರತ್ನ ಖಚಿತ ವೇಣುಗೋಪಾಲ ಸ್ವಾಮಿ ಜಾತ್ರೆ

ಬೆಂಗಳೂರು, ಫೆಬ್ರವರಿ 18; ಅಪರೂಪದ ವಜ್ರಾಭರಣಗಳ ಜಾತ್ರೆ ಎಂದರೆ ಮೊದಲಿಗೆ ನೆನಪಾಗುವುದು ಮೇಲುಕೋಟೆಯ ಚೆಲುವರಾಯಸ್ವಾಮಿ ಜಾತ್ರೆ,. ಆದರೆ ಇಂತಹ ಒಂದು ಅಪರೂಪದಲ್ಲಿ ಅಪರೂಪವಾದ ರತ್ನ, ವಜ್ರ ಖಚಿತ ಜಾತ್ರೆ ಬೆಂಗಳೂರಿನಲ್ಲಿ ನಡೆಯುತ್ತದೆ. ಅಪರೂಪದ ಆಭರಣಗಳನ್ನ ನೋಡಲು ಜನರು ಮುಗಿಬಿಳುತ್ತಾರೆ.

ಬೆಳ್ಳಿ ಕಿರೀಟ, ಬಂಗಾರದ ಕಿರೀಟ, ರತ್ನ ಖಚಿತ ವಜ್ರಗಳ ಕಿರೀಟ, ಕಂಠೀಹಾರ, ಕಮಲದ ಹಾರ, ಮುತ್ತಿನ ಕಂಠಸಾರ, ಚಂದ್ರಹಾರ ಹೀಗೆ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಬರೋಬ್ಬರಿ 21 ಬಗೆಯ ವಿವಿಧ ರಾಜರ ಕಾಲದ ಅಪರೂಪದ ಬೆಲೆ ಕಟ್ಟಲಾಗದ ಆಭರಣಗಳನ್ನು ಜಾತ್ರೆಯಲ್ಲಿ ನೋಡಬಹುದು.

ಒಂದೊಂದು ಪ್ರದಕ್ಷಿಣೆಗೂ ಒಂದೊಂದು ಬಗೆಯ ಕಿರೀಟ ಮತ್ತು ಆಭರಗಳನ್ನು ಹಾಕಿ ಮೆರವಣಿಗೆ ಮಾಡುತ್ತಿದ್ದರೆ ಭಕ್ತರು ಒಂದು ಕ್ಷಣ ಮೂಕವಿಸ್ಮಿತರಾಗುತ್ತಿದ್ದರು. ಈ ಜಾತ್ರೆ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ದ ಕೋಟೆ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ.

500ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕೋಟೆ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ರಣಬೈರೆಗೌಡರಿಂದ ಟಿಪ್ಪು ಸುಲ್ತಾನ್ ವರೆಗೂ ಸಾಕಷ್ಟು ರಾಜ ಮಹಾರಾಜರು ಅಪಾರ ಪ್ರಮಾಣದ ಬೆಲೆಕಟ್ಟಲಾಗದ ಆಭರಣಗಳನ್ನ ನೀಡಿದ್ದಾರೆ. ಪ್ರತಿವರ್ಷ ಹುಣ್ಣಿಮೆಯ ನಂತರದ ದಿನ ಆಭರಣಗಳನ್ನ ಹಾಕಿ ಅದ್ದೂರಿ ಜಾತ್ರೆ ಮಾಡಲಾಗುತ್ತಿತ್ತು.

ವರ್ಷಕ್ಕೆ ಒಂದು ಬಗೆಯ ಆಭರಣ

ವರ್ಷಕ್ಕೆ ಒಂದು ಬಗೆಯ ಆಭರಣ

ಕಾಲ ಕ್ರಮೇಣ ಅಪರೂಪದ ವಜ್ರಾಭರಣಗಳನ್ನೆಲ್ಲ ಸರ್ಕಾರವು ರಕ್ಷಣೆಯ ಹಿತದೃಷ್ಟಿಯಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ವರ್ಷಕ್ಕೊಮ್ಮೆ ಮಾತ್ರ ನಡೆಯುವ ಜಾತ್ರೆಗೆ ಒಂದೊಂದು ಸೆಟ್ ಆಭರಣಗಳನ್ನು ಮೆರವಣಿಗೆಗೆ ನೀಡುತ್ತದೆ. ಗುರುವಾರ ನಡೆದ ಬ್ರಹ್ಮರಥೋತ್ಸವಕ್ಕೆ ಬೆಳಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 10ನೇ ಬಾಕ್ಸ್‌ನ 21 ಬಗೆಯ ಒಂದು ಸೆಟ್ ವಜ್ರಾಭರಣಗಳನ್ನು ದೇವಾಲಯಕ್ಕೆ ತಂದು ಜಾತ್ರೆ ನಡೆಸಲಾಯಿತು. ಅಪರೂಪದ ರತ್ನಖಚಿತ ಆಭರಣಗಳನ್ನು ಕಂಡ ಭಕ್ತರು ಸಂತಸಗೊಂಡರು.

12 ಸೆಟ್ ಆಭರಣಗಳಿವೆ

12 ಸೆಟ್ ಆಭರಣಗಳಿವೆ

ದೇಶದಲ್ಲಿ ಮೇಲುಕೋಟೆ, ತಿರುಪತಿ, ತಿರುವನಂತಪುರಂ ನಂತರ ಅತಿ ಹೆಚ್ಚು ಪುರಾತನವಾದ ಬೆಲೆ ಕಟ್ಟಲಾಗದ ಸಂಪತ್ತಿರುವ 500 ವರ್ಷಗಳ ಇತಿಹಾಸದ ಕೋಟೆ ವೇಣುಗೋಪಾಲ ಸ್ವಾಮಿಗೆ 12 ಸೆಟ್ ವಜ್ರಾಭರಣಗಳಿವೆ. ಪ್ರತಿವರ್ಷ ಒಂದೊಂದು ಸೆಟ್ ಆಭರಣಗಳನ್ನು ಹಾಕಿ ಅದ್ದೂರಿಯಾಗಿ ವಜ್ರಾಭರಣದ ಜಾತ್ರೆ ಮಾಡುತ್ತಾರೆ. ಹೀಗಾಗಿ ಈ ಭಾರಿ ಹಾಕಿದ ಆಭರಣ ಮತ್ತೆ 12 ವರ್ಷದ ಬಳಿಕ ಹಾಕಲಾಗುತ್ತದೆ. ಸಂಪೂರ್ಣ ಸಂಪತ್ತಿನ ಶೇ 10 ರಷ್ಟು ಆಭರಣಗಳನ್ನ ಮಾತ್ರ ತಂದು ದೇವರಿಗೆ ಹಾಕಿ ಜಾತ್ರೆ ಮಾಡುವುದು ಇಲ್ಲಿನ ವಿಶೇಷ.

ಕೋವಿಡ್‌ನಿಂದ ರದ್ದಾಗಿದ್ದ ಜಾತ್ರೆ

ಕೋವಿಡ್‌ನಿಂದ ರದ್ದಾಗಿದ್ದ ಜಾತ್ರೆ

ವಜ್ರಾಭರಣಗಳ ಜೊತೆ ದೇವಾಲಯದ ಆವರಣದಲ್ಲಿ ವೇಣುಗೋಪಾಲಸ್ವಾಮಿ ಮೂರು ಸುತ್ತು ಹಾಕಲಿದೆ. ಮೊದಲ ಸುತ್ತಿಗೆ ಬೆಳ್ಳಿ ಕಿರೀಟ, 2ನೇ ಸುತ್ತಿಗೆ ಬಂಗಾರದ ಕಿರೀಟ ಮತ್ತು3ನೇ ಸುತ್ತಿಗೆ ರತ್ನ ಖಚಿತ ವಜ್ರದ ಕಿರೀಟವಿಟ್ಟು ಮೆರವಣಿಗೆ ಮಾಡಲಾಗುತ್ತದೆ. ನಂತರ ಬ್ರಹ್ಮರಥೋತ್ಸವದ ವೇಳೆ ಆಭರಣಗಳನ್ನು ವಾಪಸ್ ಸರ್ಕಾರದ ಖಜಾನೆಗೆ ಕಳಿಸುತ್ತಾರೆ. ಇನ್ನೂ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ರದ್ದಾಗಿದ್ದ ಜಾತ್ರೆ ಈ ಭಾರಿ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಕ್ಕೆ ಬಾಳೆಹಣ್ಣು ಅರ್ಪಿಸಿ ಇಷ್ಟಾರ್ಥಸಿದ್ದಿಗೆ ಪ್ರಾರ್ಥಿಸಿದರು.

ಒಂದು ವರ್ಷ ಕಾಯಬೇಕಿದೆ

ಒಂದು ವರ್ಷ ಕಾಯಬೇಕಿದೆ

ಕೋವಿಡ್ ಕಾರಣದಿಂದ ನಡುವೆ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಜಾತ್ರೆ ಈ ಭಾರಿ ಅದ್ದೂರಿಯಾಗಿ ನೆರವೇರಿದೆ. ರತ್ನ ಖಚಿತ ಆಭರಣಗಳನ್ನ ಕಂಡು ಭಕ್ತರು ಸಂತಸಗೊಂಡಿದ್ದಾರೆ. ಇನ್ನೂ ಇಂತಹ ಅಪರೂಪದ ಬೆಲೆ ಕಟ್ಟಲಾಗದ ವಜ್ರಾಭರಣಗಳನ್ನು ನೋಡಲು ಮುಂದಿನ ವರ್ಷದ ತನಕ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+