ಮೋದಿ ಮಾತಿಗೆ ದೇಶಪಾಂಡೆ ತಿರುಗೇಟು!
ಬೆಂಗಳೂರಿನಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ, ಸಿಬಿಐ ಕೃಪೆಯಿಂದ ಕೇಂದ್ರದಲ್ಲಿ ಯುಪಿಎ ಅಧಿಕಾರ ನಡೆಸುತ್ತಿದೆ ಎಂಬ ಮೋದಿ ಹೇಳಿಕೆಯನ್ನು ಖಂಡಿಸಿದರು. ಸಿಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗೂ ಅದು ಅಸ್ತಿತ್ವದಲ್ಲಿತ್ತು ಎಂಬುದನ್ನು ಮೋದಿ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಬೆಂಗಳೂರಿನಲ್ಲಿ ಐಟಿ ಕ್ರಾಂತಿ ಆಗಿರುವುದು ಕೇವಲ ಎನ್‌ಡಿಎ ಸರ್ಕಾರದಿಂದ ಎಂದು ಮೊದಿ ಜನರಿಗೆ ತಪ್ಪು ಸಂದೇಶ ಸಾರಿದ್ದಾರೆ. 1997 ರಲ್ಲಿ ಪ್ರತ್ಯೇಕ ಐಟಿ ನೀತಿಯನ್ನು ರಾಜ್ಯದಲ್ಲಿ ರೂಪಿಸಿದ್ದು, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, ಅವರ ಪ್ರಯತ್ನದಿಂದ ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿ ಬದಲಾಯಿತು ಎಂದು ದೇಶಪಾಂಡೆ ತಿಳಿಸಿದರು.('ಭಾರತ ಗೆಲ್ಲಿಸಿ'ಸಮಾವೇಶ ಮೋದಿ ಹೇಳಿದ್ದೇನು? )
ಪ್ರಧಾನಿ ಹುದ್ದೆಯ ಕನಸು ಕಾಣುತ್ತಿರುವ ನರೇಂದ್ರ ಮೋದಿ, ಯುಪಿಎ ಸರ್ಕಾರವಾಗಲಿ ಅಥವಾ ರಾಜ್ಯ ಕಾಂಗ್ರೆಸ್ ಸರ್ಕಾರವಾಗಲಿ ಚುನಾವಣೆಯಲ್ಲಿ ಜನಾದೇಶ ಮೂಲಕವೇ ಅಧಿಕಾರಕ್ಕೆ ಬಂದಿವೆ. ಪ್ರಜಾಪ್ರಭುತ್ವದಲ್ಲಿ ಮೋದಿ ಅವರಿಗೆ ನಂಬಿಕೆ ಇದ್ದರೆ, ಇಂತಹ ಹೇಳಿಕೆ ನೀಡಬಾರದು ಎಂದರು.
ಬಿಜೆಪಿ ಮುಖಂಡರಾ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ ಮುಂತಾದವರು ಸಿದ್ದರಾಮಯ್ಯ ಅವರನ್ನು ಜಾತಿವಾದಿ, ಕೋಮುವಾದಿ ಎಂದು ಅತ್ಯಂತ ಕೀಳು ಅಭಿರುಚಿಯಿಂದ ಟೀಕಿಸಿರುವುದನ್ನು ಖಂಡಿಸಿದ ದೇಶಪಾಂಡೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಎಲ್ಲರೂ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ. ಜಾತಿ ಸಂಘರ್ಷಕ್ಕೆ ಅವಕಾಶವೇ ಇಲ್ಲವಾಗಿದೆ. ಇದು ಬಿಜೆಪಿ ನಾಯಕರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ನಿಜವಾದ ಕೋಮುವಾದಿಗಳು ಯಾರು ಎಂಬುದನ್ನು ರಾಜ್ಯದ ಜನರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ನಡೆದ ಕೋಮು ದೌರ್ಜನ್ಯ, ಸಂಘ- ಪರಿವಾರಗಳ ಆಟಾಟೋಪಗಳನ್ನು ನೋಡಿದ ಜನರೇ ಯಾರು ಕೋಮುವಾದಿಗಳು ಎಂದು ನಿರ್ಧರಿಸಿದ್ದಾರೆ ಎಂದು ದೇಶಪಾಂಡೆ ತಿಳಿಸಿದರು.