ದಿ.ಜಿ. ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ: ಜೆಡಿಎಸ್‌ನಿಂದ LR ಶಿವರಾಮೇಗೌಡ ಉಚ್ಚಾಟನೆ
ಬೆಂಗಳೂರು, ಜನವರಿ 31: ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಒಕ್ಕಲಿಗ ಸಮುದಾಯದ ಹಿರಿಯರೂ ಆಗಿದ್ದ ದಿವಂಗತ ಜಿ. ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಲೋಕಸಭಾ ಸದಸ್ಯ ಎಲ್.ಆರ್. ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರ ಅನುಮತಿ ಪಡೆಯಲಾಗಿದ್ದು, ಶಿವರಾಮೇಗೌಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸೂಚಿಸಲಾಗಿದೆ. ಇನ್ನೇನು ಆದೇಶ ಹೊರಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರಿನ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‌ಡಿಕೆ, ಒಕ್ಕಲಿಗ ಸಮುದಾಯದ ಹಿರಿಯ ನಾಯಕರು ಹಾಗೂ ಇಡೀ ರಾಜ್ಯವೇ ಗೌರವಿಸುತ್ತಿದ್ದ ಜಿ. ಮಾದೇಗೌಡರಂಥ ಹಿರಿಯರ ಬಗ್ಗೆ ಶಿವರಾಮೇಗೌಡರು ಅಸಭ್ಯವಾಗಿ ಮಾತನಾಡಿರುವುದು ಅಕ್ಷಮ್ಯ. ಮಾದೇಗೌಡರ ಬಗ್ಗೆ ಅವರು ಮಾತನಾಡಿರುವ ಆಡಿಯೋವನ್ನು ನಾನೂ ಕೇಳಿದ್ದೇನೆ. ಇಂಥ ನಡವಳಿಕೆಯನ್ನು ಸಹಿಸುವ ಪ್ರಶ್ನೆ ಇಲ್ಲ ಎಂದರು.

ಮಂಡ್ಯದ ರಾಜಕೀಯದ ಬಗ್ಗೆ ಮಾತನಾಡುತ್ತಾ, ಎಲ್.ಆರ್. ಶಿವರಾಮೇಗೌಡರು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಸಭ್ಯವಾಗಿ ಅವರು ಮಾತನಾಡಿರುವ ಮೊಬೈಲ್ ಕರೆಯ ಆಡಿಯೋ ಈಗ ವೈರಲ್ ಆಗಿದೆ. ತಮಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಮಾದೇಗೌಡರ ಬಗ್ಗೆ ಅಂತಹ ಕೆಳಮಟ್ಟದ ಭಾಷೆ ಬಳಸುವ ಅಗತ್ಯ ಇರಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಮಾದೇಗೌಡರಿಗೂ ಹಾಗೂ ನಮ್ಮ ಪಕ್ಷಕ್ಕೂ ರಾಜಕೀಯವಾಗಿ ವಿಭಿನ್ನತೆ ಇತ್ತು ನಿಜ. ಹಾಗೆಂದು ಅವರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದನ್ನು ಒಪ್ಪಲಾಗದು. ಅಲ್ಲದೆ, ಮಾದೇಗೌಡರು ಇಂದು ನಮ್ಮ ನಡುವೆ ಬದುಕಿಲ್ಲ. ದಿವಂಗತ ನಾಯಕರ ಹೆಸರನ್ನು ಶಿವರಾಮೇಗೌಡರು ಯಾಕೆ ತಂದರೋ ಗೊತ್ತಿಲ್ಲ. ಇಂತಹ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಕಿಡಿಕಾರಿದರು.

ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದೇನೆ. ಅಂತವರು ಪಕ್ಷದಲ್ಲಿ ಇದ್ದರೆ ಶೋಭೆ ಇರುವುದಿಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ, ಮಾತೆತ್ತಿದರೆ ಶಿವರಾಮೇಗೌಡರು ಹಣದ ಬಗ್ಗೆ ಮಾತನಾಡುತ್ತಾರೆ. ಹಣವನ್ನು ಇವರೊಬ್ಬರೇ ಕಂಡಿಲ್ಲ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಣ ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ. 30 ಕೋಟಿ ರೂ. ಖರ್ಚು ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಅವರು ಅಷ್ಟು ಹಣವನ್ನು ಅದ್ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಪದೇ ಪದೇ ಶಿವರಾಮೇಗೌಡರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಲ್ಲಿಯವರೆಗೆ ಇಂಥ ಚಾಳಿಯನ್ನು ತಿದ್ದಿಕೊಳ್ಳುತ್ತಾರೆ ಅಂದುಕೊಂಡು ಸುಮ್ಮನಿದ್ದೆವು. ಆದರೆ ಅದು ಆಗಲಿಲ್ಲ. ಎಲ್ಲಕ್ಕೂ ಒಂದು ಇತಿಮಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಸಿಎಂ ಇಬ್ರಾಹಿಂ ಏನ್ಮಾಡ್ತಾರೆ ನೋಡೋಣ
ಕಾಂಗ್ರೆಸ್ ಪಕ್ಷ ಬಿಟ್ಟಿರುವ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅವರು ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟಿದ್ದೇನೆ ಎಂದಿರುವ ಅವರು, ಮತ್ತೆ ಆ ಪಕ್ಷಕ್ಕೆ ಹೋಗಲ್ಲ ಅಂತ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಇದೇ ಮಾತನ್ನು ಅವರು ಪುನಃ ತಿಳಿಸಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಎಲ್ಲ ಕಡೆ ಬಿಟ್ಟು ಹೋಗುತ್ತಿದ್ದಾರೆ
ಪಕ್ಷಗಳನ್ನು ನಾಯಕರು ಬಿಟ್ಟು ಹೋಗುವುದು ಬರೀ ಕರ್ನಾಟಕದಲ್ಲಿ ಮಾತ್ರ ಆಗುತ್ತಿದೆ ಎಂದಲ್ಲ. ಉತ್ತರಪ್ರದೇಶ, ಗೋವಾ, ಪಂಜಾಬ್ ರಾಜ್ಯಗಳಲ್ಲಿ ಕೂಡ ಆಗುತ್ತಿದೆ. ಚುನಾವಣೆ ಸಂದರ್ಭಗಳಲ್ಲಿ ಈ ರೀತಿಯ ಪಕ್ಷಾಂತರ ಜಾಸ್ತಿ. ಬೆಳಗ್ಗೆ ಒಂದು ಪಕ್ಷದಲ್ಲಿ ಇದ್ದರೆ, ಸಂಜೆ ಇನ್ನೊಂದು ಪಾರ್ಟಿಗೆ ಹೋಗುತ್ತಾರೆ. ಇಂದು ರಾಜಕೀಯ ನಾಯಕರಲ್ಲಿ ನಿಷ್ಠೆ ಎಂಬುದು ಇಲ್ಲ. ಇಂಥವರು ಇಂಥಹದ್ದೇ ಪಕ್ಷದಲ್ಲಿ ಇರುತ್ತಾರೆ ಎಂದು ಊಹೆ ಮಾಡಲು ಕೂಡ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
Recommended Video
ಅಲ್ಪಸಂಖ್ಯಾತ ನಾಯಕರ ಸಭೆ
ಇಂದು ಪಕ್ಷದ ಕಚೇರಿಯಲ್ಲಿ ಅಲ್ಪಸಂಖ್ಯಾತ ನಾಯಕರ ಸಭೆ ನಡೆಯಿತು. ರಾಜ್ಯದ ಮೂವತ್ತು ಜಿಲ್ಲೆಗಳಿಂದ ಮುಖಂಡರು ಬಂದಿದ್ದಾರೆ. ಪಕ್ಷವನ್ನು ಬಲವರ್ಧನೆ ಮಾಡುವುದು ಹಾಗೂ ಮುಂದಿನ ಚುನಾವಣೆಗೆ ಉತ್ತಮ ಸಾಧನೆ ಮಾಡಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದು ಅವರು ಪ್ರಶ್ನಯೊಂದಕ್ಕೆ ಉತ್ತರ ನೀಡಿದರು.












Click it and Unblock the Notifications