ಸರ್ಕಾರಿ ಅಧಿಕಾರಿ ಪ್ರತಿಮಾ ಹತ್ಯೆ; ಮಾಜಿ ಕಾರು ಚಾಲಕ ವಶಕ್ಕೆ
ಬೆಂಗಳೂರು, ನವೆಂಬರ್ 06: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ಮುಂದುವರೆಸಿದ್ದಾರೆ. ಹತ್ಯೆ ಆರೋಪಿಗಳನ್ನು ಹಿಡಿಯಲು ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
37 ವರ್ಷದ ಪ್ರತಿಮಾ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ದೊಡ್ಡಕಲ್ಲಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿತ್ತು. ಉಸಿರುಗಟ್ಟಿಸಿ, ಕುತ್ತಿಗೆ ಸೀಳಿ ಅವರನ್ನು ಹತ್ಯೆ ಮಾಡಲಾಗಿತ್ತು.

ಪ್ರತಿಮಾ ಹತ್ಯೆ ಪ್ರಕರಣದ ತನಿಖೆ ಮುಂದುವರೆಸಿರುವ ಪೊಲೀಸರು ಪ್ರತಿಮಾ ಅವರ ಮಾಜಿ ಕಾರು ಚಾಲಕ ಕಿರಣ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಿರಣ್‌ರನ್ನು ಕೆಲವು ದಿನಗಳ ಹಿಂದೆ ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು. ಆದ್ದರಿಂದ ಕೊಲೆ ಮಾಡಿರಬಹುದು ಎಂಬ ಶಂಕೆಯಿಂದ ವಿಚಾರಣೆ ನಡೆಸಲಾಗುತ್ತಿದೆ.
ಹಲವು ವರ್ಷಗಳಿಂದ ಕಿರಣ್ ಪ್ರತಿಮಾ ಅವರ ಕಾರು ಚಾಲಕರಾಗಿದ್ದರು. ಕಿರಣ್ ತಂದೆ ಸಹ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಚಾಲಕರಾಗಿದ್ದರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಿರಣ್‌ರನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಚಾಲಕನನ್ನು ನೇಮಿಸಲಾಗಿತ್ತು.
ಪ್ರತಿಮಾ ಹತ್ಯೆ ನಡೆದ ಬಳಿಕ ಕಿರಣ್ ಚಾಮರಾಜನಗರ ಕಡೆ ಸಾಗುತ್ತಿರುವ ಮಾಹಿತಿ ಸಂಗ್ರಹ ಮಾಡಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟು 3 ತಂಡಗಳು ಪ್ರತಿಮಾ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೊಂಡಿವೆ.
ಮನೆ ಬಾಗಿಲಲ್ಲಿಯೇ ಹತ್ಯೆ?; ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಮಾ ಕೆಲಸ ಮುಗಿಸಿ ಮನೆಗೆ ವಾಪಸ್ ಆಗಿದ್ದರು. ಕಾರು ಚಾಲಕ ಮನೆಗೆ ಬಿಟ್ಟು ಹೋದ ಬಳಿಕ ಅವರು ಯಾವುದೇ ಫೋನ್ ಕರೆಗೂ ಉತ್ತರ ನೀಡಿರಲಿಲ್ಲ. ಭಾನುವಾರ ಅವರ ಸಹೋದರ ಅಪಾರ್ಟ್‌ಮೆಂಟ್‌ಗೆ ಆಗಮಿಸಿ ನೋಡಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಸಮಯದಲ್ಲಿ ಕೆಲವು ಮಾಹಿತಿ ಬಯಲಾಗಿದೆ. ಮನೆಯ ಹೊರ ಭಾಗದ ಕಬ್ಬಿಣದ ಗ್ರಿಲ್‌ನ ಬಾಗಿಲು ತೆರೆದ ಬಳಿಕ ಪ್ರತಿಮಾ ಮುಖ್ಯ ಬಾಗಿಲು ತೆರೆದು ಒಳಗೆ ಬಂದಿದ್ದರು. ಆಗಲೇ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ.
ಮನೆಯ ಮುಖ್ಯ ಬಾಗಿಲು ಬಳಿಯೇ ಪ್ರತಿಮಾ ಊಟದ ಡಬ್ಬಿ, ಬ್ಯಾಗ್, ಕನ್ನಡಕ ಬಿದ್ದಿತ್ತು. ಮುಖ್ಯ ಬಾಗಿಲಿನಿಂದ ಅವರನ್ನು ದುಷ್ಕರ್ಮಿಗಳು ಎಳೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಬೆಡ್ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಭಾನುವಾರ ಶವ ಪತ್ತೆಯಾಗಿತ್ತು.
ಸರ್ಕಾರಿ ಅಧಿಕಾರಿ ಪ್ರತಿಮಾಗೆ ಪರಿಚಯ ಇರುವವರು, ಈಗಾಗಲೇ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳೇ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರತಿಮಾ ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಅವರಿಗೆ ಕೊಲೆಯಾಗುವ ಮೊದಲು ಬಂದ ದೂರವಾಣಿ ಕರೆಗಳ ಬಗ್ಗೆ ಸಹ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಪ್ರತಿಮಾ ಹತ್ಯೆ ಪ್ರಕರಣದ ಬಗ್ಗೆ ಗಣಿ ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದ್ದಾರೆ. "ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆಯ ಬಗ್ಗೆ ಹಲವು ಸಂಶಯಗಳಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
"ಕೆಲವರು ಕೌಟುಂಬಿಕ ಕಾರಣ, ಕೆಲವರು ಇಲಾಖೆ ವಿಚಾರ, ಕೆಲವರು ಕಾರು ಚಾಲಕನನ್ನು ಸೇವೆಯಿಂದ ತೆಗೆದಿದ್ದು ಕಾರಣ ಎಂದು ಹೇಳುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ಕುರಿತು ಸಹ ಆರೋಪ ಕೇಳಿ ಬಂದಿದೆ" ಎಂದರು.
"ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆ ಬಗ್ಗೆ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿತ್ತು. ಇದರಲ್ಲಿ ಪ್ರತಿಮಾ ಸಹ ಭಾಗಿಯಾಗಿದ್ದರು. ಅವರು ಉತ್ತಮ ಅಧಿಕಾರಿಯಾಗಿದ್ದರು. ಈ ಹತ್ಯೆಯ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾದ ಮಾಹಿತಿ ಸಿಗಲಿದೆ" ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications