Bengaluru: 3 ವರ್ಷದಲ್ಲಿ ಡೆಂಗ್ಯೂನಿಂದ 1 ಸಾವು: ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 08: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ದಿಢೀರನೇ ಏರಿಕೆ ಆಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಡೆಂಗ್ಯೂ ಲಕ್ಷಣ ಸಹಿತ ಆಸ್ಪತ್ರೆಗೆ ದಾಖಲಾದವರ ಪೈಕಿ 7 ಸಾವುಗಳ ವರದಿ ಆಗಿದೆ. ಆದರೆ ಇದರಲ್ಲಿ ವೈರಸ್‌ನಿಂದಲೇ ಮೃತಪಟ್ಟ ಬಗ್ಗೆ ಒಂದು ಸಾವು ವರದಿ ಆಗಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮೊದಲ ದೃಢಪಡಿಸಿದ ಡೆಂಗ್ಯೂ ಸಂಬಂಧಿತ ಸಾವು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡೆಂಗ್ಯೂ ಪ್ರಕರಣಗಳು ಜೂನ್, ಜುಲೈ ತಿಂಗಳಿಗಿಂತಲು ಆಗಸ್ಟ್ ನಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆ ಆಗಿವೆ. ಬಿಬಿಎಂಪಿ ಅಧಿಕಾರಿಗಳು ತಿಳಿಸುವ ಪ್ರಕಾರ, ನಗರದಲ್ಲಿ ಈ ವರ್ಷ ಈವರೆಗೆ 5,000 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿ ಆಗಿವೆ. ಅತ್ಯಧಿಕ ತಾಪಮಾನ ದಾಖಲಾತಿ ಮಧ್ಯದಲ್ಲೂ ಸಹ ಆಗಸ್ಟ್ ನಲ್ಲಿ ಒಂದೇ ತಿಂಗಳಲ್ಲಿ 2,374 ಡೆಂಗ್ಯೂ ಪ್ರಕರಣಗಳು ವರದಿ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆ ಈ ಅನಾರೋಗ್ಯ ಸ್ಥಿತಿ ಕುರಿತು ಚರ್ಚಿಸಿದರು. ಸೆಪ್ಟಂಬರ್‌ನಲ್ಲಿ ಅಧಿಕ ಮಳೆ ಆಗುವುದರಿಂದ ಡೆಂಗ್ಯೂ ಪ್ರಕರಣ ಮತ್ತಷ್ಟು ಹೆಚ್ಚಾಗದಂತೆ ನೋಡಿಕೊಳ್ಳಲು ಸಚಿವರು ಸೂಚಿಸಿದರು. ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.
ಕೊಳಗೇರಿ ಅಲ್ಲದ ಸ್ಥಳಗಳಲ್ಲಿಯೂ ಡೆಂಗ್ಯೂ ಏರಿಕೆ
ಶುಚಿತ್ವ ಇಲ್ಲದಿರುವುದು, ಕೊಳಗೇರಿ ಪ್ರದೇಶದಂತಹ ವಾತಾವರಣ, ಸೊಳ್ಳೆ ಕಡಿತದಿಂದ ಡೆಂಗ್ಯೂ ತಗುಲುವ ಸಾಧ್ಯತೆ ಹೆಚ್ಚಿಸುತ್ತದೆ. ಮಳೆ ಹೆಚ್ಚಾದಾಗ ಪ್ರಕರಣಗಳು ಸಾಮನ್ಯವಾಗಿ ಹೆಚ್ಚಾಗುತ್ತವೆ. 2022 ರಲ್ಲಿ ಪ್ರಕರಣಗಳು ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಉತ್ತುಂಗಕ್ಕೇರಿದವು. ಈ ವರ್ಷ, ಜುಲೈ, ಆಗಸ್ಟ್‌ನಲ್ಲಿ ಮತ್ತು ಈ ತಿಂಗಳವರೆಗೆ ಸಂಖ್ಯೆಗಳು ಹೆಚ್ಚಾಗಿವೆ ಎಂದು ಸಚಿವರು ತಿಳಿಸಿದರು.
ಪ್ರಕರಣಗಳ ಮಾದರಿ ಬಗ್ಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಕೊಳೆಗೇರಿಗಳಲ್ಲಿ ಬೇರೂರಿದ್ದ ಈ ಡೆಂಗ್ಯೂ ರೋಗ ಇದೀಗ ದೊಡ್ಡ ನಗರಗಳಿಗೆ ಕಾಲಿಟ್ಟಿದೆ. 'ಈಡಿಸ್' ಸೊಳ್ಳೆಗಳಿಗೆ ಸಂತಾನೋತ್ಪತ್ತಿಗೆ ಶುದ್ಧ ನೀರು ಬೇಕಾಗುತ್ತದೆ. ನಿರ್ಮಾಣ ಸ್ಥಳಗಳು ಮತ್ತು ದೊಡ್ಡ ಅಪಾರ್ಟ್‌ಮೆಂಟ್ ಸಂಕೀರ್ಣಗಳು ಇರುವಲ್ಲೆಲ್ಲಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪಾಲಿಕೆ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ್ ಚಂದ್ರ ಅವರು ಮಾಹಿತಿ ನೀಡಿದರು.

ಮನೆ ಒಳಗೆ, ಸುತ್ತಮುತ್ತ ಟ್ರೇಗಳೊಳಗೆ ಮಡಕೆಗಳು, ಮೀನಿನ ತೊಟ್ಟಿಗಳು, ಇನ್ನಿತರ ನೀರು ನಿಲ್ಲುವ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳುವ ಜೊತೆಗೆ ಅಗತ್ಯ ಎಚ್ಚರಿಕೆ ವಹಿಸಿ, ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕಡಿಮೆ
ಬೆಂಗಳೂರಿನಲ್ಲಿ ಈ ವರ್ಷ ಹೋಲಿಕೆ ಮಾಡಿದರೆ, ಡೆಂಗ್ಯೂ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕಡಿಮೆ. ರೋಗಲಕ್ಷಣಗಳು ಕಾಣಿಸಿಕೊಂಡ ಮೊದಲ ಅಥವಾ ಎರಡನೇ ವಾರವಾದರೂ ಸಹ ಇನ್ನೂ ನಾವು ಆತಂಕದ ಸ್ಥಿತಿ ತಲುಪಿಲ್ಲ. ಇದುವರೆಗೆ ಎಲ್ಲಾ ಪ್ರಕರಣಗಳನ್ನು ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ಬರೀ 1,000 ಆಶಾ ಕಾರ್ಯಕರ್ತೆಯರು ಮಾತ್ರ ಕಣ್ಗಾವಲು ನಡೆಸುತ್ತಿದ್ದಾರೆ. ಮುಂಚೂಣಿಯಲ್ಲಿರುವ ಸಿಬ್ಬಂದಿಗಳು. ಹೆಚ್ಚಿನ ಆಶಾ ಕಾರ್ಯಕರ್ತೆಯರನ್ನು ನೇಮಿಸುವಂತೆ ನಾವು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.












Click it and Unblock the Notifications