ದೀಪಾವಳಿ; ಬೆಂಗಳೂರಲ್ಲಿ 24*7 ಚಿಕಿತ್ಸೆ ಸಿಗುವ ಆಸ್ಪತ್ರೆಗಳು
ಬೆಂಗಳೂರು, ನವೆಂಬರ್ 12; ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಜನರು ಹಬ್ಬವನ್ನು ಆಚರಣೆ ಮಾಡಲು ಪಟಾಕಿ ಸಿಡಿಸುತ್ತಿದ್ದಾರೆ. ಪಟಾಕಿ ಮಾರಾಟ ಮತ್ತು ದಾಸ್ತಾನು ಕುರಿತು ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಹಸಿರು ಪಟಾಕಿ ಸಿಡಿಸಿ, ಪರಿಸರ ರಕ್ಷಣೆ ಸಹಕರಿಸಿ ಎಂದು ಮನವಿ ಮಾಡಲಾಗಿದೆ.
ಜನರು ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ಹೊರತು ಪಡಿಸಿ ಉಳಿದ ಪಟಾಕಿಗಳನ್ನು ಬಳಕೆ ಮಾಡಬಾರದು. ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಕರೆ ಕೊಡಲಾಗಿದೆ.

ಪಟಾಕಿ ಸಿಡಿಸುವಾಗ ಪಟಾಕಿ ಬಳಸುವಾಗ ಪ್ರಾಣಿ-ಪಕ್ಷಿಗಳು, ಮಕ್ಕಳು ಮತ್ತು ವೃದ್ದರಿಗೆ ತೊಂದರೆಯಾಗದಂತೆ ಬಳಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪಟಾಕಿ ಹಚ್ಚಬಾರದು ಎಂದು ಸೂಚನೆ ನೀಡಲಾಗಿದೆ.
ಪಟಾಕಿಯಿಂದ ಗಾಯ, ಚಿಕಿತ್ಸೆ; ಪಟಾಕಿ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮಕ್ಕಳು ಪಟಾಕಿ ಹೊಡೆಯುವಾಗ ಅವರ ಜೊತೆ ದೊಡ್ಡವರು ಇದ್ದು, ಯಾವುದೇ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕರೆ ನೀಡಲಾಗಿದೆ.
ಪಟಾಕಿ ಹಚ್ಚುವಾಗ ಆಗುವ ಸುಟ್ಟಗಾಯ, ಕಣ್ಣಿನ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಆಸ್ಪತ್ರೆಗಳು ಸಿದ್ಧವಾಗಿವೆ. ಇದಕ್ಕಾಗಿ ವಿಶೇಷ ವಾರ್ಡ್, ಸಹಾಯವಾಣಿಯನ್ನು ಸಹ ಆರಂಭಿಸಿವೆ. 24*7 ಚಿಕಿತ್ಸೆಯನ್ನು ನೀಡಲಾಗುತ್ತದೆ.
ವಿಕ್ಟೋರಿಯಾ ಮತ್ತು ಮಿಂಟೋ ಆಸ್ಪತ್ರೆಗಳ ವೈದ್ಯರು ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಒಂದು ವಾರ 24*7 ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಸಹಾಯವಾಣಿ 9481740137, 08026707176 ಮೂಲಕ ಸಂಪರ್ಕಿಸಬಹುದು.
ಪಟಾಕಿ ಹಚ್ಚುವಾಗ ಆಗುವ ಸುಟ್ಟ ಗಾಯಕ್ಕೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಜನರು ಪಟಾಕಿ ಹಚ್ಚುವಾಗ ಎಚ್ಚರ ವಹಿಸಬೇಕು. ಕಣ್ಣಿ, ಕಿವಿಗಳ ಮೇಲೆ ವಿಶೇಷ ಗಮನ ಹರಿಸಬೇಕು ಎಂದು ಕರೆ ನೀಡಲಾಗಿದೆ.
ನಾರಾಯಣ ನೇತ್ರಾಲಯ ಸಹ ಪಟಾಕಿ ಹಚ್ಚುವಾಗ ಗಾಯವಾದರೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ, ಸಹಾಯವಾಣಿ ಆರಂಭಿಸಿದೆ. ನಾರಾಯಾಣ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ನ. 12, 13 ಮತ್ತು 14ರಂದು ದಿನದ 24 ಗಂಟೆಗಳ ಕಾಲ ತುರ್ತು ಕಣ್ಣಿನ ಆರೈಕೆ ಮಾಡಲು ವ್ಯವಸ್ಥೆ ಮಾಡಿದೆ.
ಕಣ್ಣಿನ ಚಿಕಿತ್ಸೆಗಾಗಿ ನಾರಾಯಣ ನೇತ್ರಾಲಯದಿಂದ ಸಹಾಯವಾಣಿ ಆರಂಭಿಸಿದೆ. ರಾಜಾಜಿನಗರದ ಸಹಾಯವಾಣಿ 080-66121641/1643,9902546046. ಬೊಮ್ಮಸಂದ್ರದ ಎನ್‌ಹೆಚ್ ಹೆಲ್ತ್ ಸಿಟಿಯಲ್ಲಿರುವ ನಾರಾಯಣ ನೇತ್ರಾಲಯದ ಸಹಾಯವಾಣಿ 080-66660655, 9902821128.
ಪಟಾಕಿ ಹಚ್ಚುವಾಗ ಸಲಹೆಗಳು
* ಪಟಾಕಿ ಖರೀದಿ ಮಾಡುವಾಗ ಹಸಿರು ಪಟಾಕಿಗಳನ್ನು ಗುರುತಿಸಿ ಖರೀದಿ ಮಾಡಿ, ಐಎಸ್‌ಐ ಮಾರ್ಕ್ ಇದೆಯೇ? ನೋಡಿರಿ.
* ಪಟಾಕಿ ಪ್ಯಾಕೆಟ್ ಮೇಲಿರುವ ಎಚ್ಚರಿಕೆಗಳನ್ನು ಅನುರಿಸಿ
* ದೂರದಿಂದ ಪಟಾಕಿ ಹಚ್ಚಿ. ಕೈಯಲ್ಲಿ ಹಿಡಿದು ಹಚ್ಚುವ ಸಾಹಸ ಮಾಡಬೇಡಿ
* ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸಲು ಅವಕಾಶ ನೀಡಬೇಡಿ
* ಬೆಂಕಿ ಪೊಟ್ಟಣ ಸೇರಿದಂತೆ ಥಟ್ಟನೆ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ಪಟಾಕಿ ದೂರವಿಡಿ
* ಪಟಾಕಿ ಸಿಡಿಸುವಾಗ ಕಣ್ಣಿಗೆ ಹಾರಿದರೆ ಕಣ್ಣು ಉಜ್ಜಿಕೊಳ್ಳಬೇಡಿ
* ಅರ್ಧ ಸುಟ್ಟ ಪಟಾಕಿಗಳನ್ನು ಒಟ್ಟಿಗೆ ಹಾಕಿ ಬೆಂಕಿ ಹಚ್ಚಬೇಡಿ
* ಗಾಜಿನ ಡಬ್ಬ, ಬಾಟಲಿ, ಪಾತ್ರಗಳಲ್ಲಿ ಪಟಾಕಿ ಇಟ್ಟು ಸಿಡಿಸಬೇಡಿ












Click it and Unblock the Notifications