ಚನ್ನಪಟ್ಟಣದ ಜನರ ಋಣ ತೀರಿಸುವೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್!
ಕರ್ನಾಟಕದಲ್ಲಿ ಚುನಾವಣೆ ಅಬ್ಬರ ಸದ್ಯಕ್ಕೆ ಮುಗಿದಿಲ್ಲ, ಯಾಕಂದ್ರೆ ಇದೀಗ ಉಪಚುನಾವಣೆ ಅಖಾಡ ರಂಗೇರುತ್ತಿದೆ. ಹೇಗೆ ಅಂದ್ರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋದಕ್ಕೆ, ತಮ್ಮ ಶಾಸಕ ಸ್ಥಾನ ಬಿಟ್ಟುಕೊಟ್ಟ ನಾಯಕರ ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ. ಈ ಪೈಕಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಭರ್ಜರಿ ರಂಗ ಪಡೆದಿದೆ. ಅದರಲ್ಲೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಲ್ಲಿಂದ ಅಖಾಡ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿಗಳ ನಡುವೆ ಮಹತ್ವದ ಹೇಳಿಕೆ ಹೊರಬಿದ್ದಿದೆ.
ಅಂದಹಾಗೆ ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಉಪಚುನಾವಣೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಿದ್ದಾಗ ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಫುಲ್ ಆಕ್ಟಿವ್ ಆಗಿದ್ದು, ಚನ್ನಪಟ್ಟಣ ಅಭಿವೃದ್ಧಿ ಕುರಿತು ಈಗ ಮಹತ್ವದ ಹೇಳಿಕೆ ನೀಡಿದ್ದಾರೆ. ಯಾರು ಏನೇ ಟೀಕೆ ಮಾಡಲಿ. ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಹಿಂದೆ ನಾನು ಇಲ್ಲಿ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುವ ಕೆಲಸ ಮಾಡಿದ್ದೆ. ಈಗಲೂ ಅದೇ ಕೆಲಸ ಮುಂದುವರಿಸುವೆ ಎಂದಿದ್ದಾರೆ ಡಿಸಿಎಂ.

ಸೈಟ್ ಹಂಚಿಕೆ ಬಗ್ಗೆ ಮಾಹಿತಿ
ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಯಾರೊಬ್ಬರಿಗೂ, ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ. ಆಶ್ರಯ ಸಮಿತಿ ಸಭೆ ಕೂಡ ಮಾಡಿಲ್ಲ ಎಂಬ ವಿಚಾರ ತಿಳಿಯಿತು. ಈ ಹಿಂದೆ ಇದ್ದವರು ಯಾಕೆ ಮಾಡಲಿಲ್ಲ ಎಂದು ಇದೀಗ ನಾನು ಪ್ರಶ್ನೆ ಮಾಡುವುದಿಲ್ಲ. ಯಾರಿಗೆ ನಿವೇಶನವಿಲ್ಲ ಆಯಾ ಊರಲ್ಲಿ ಸರ್ಕಾರವೇ 2 ರಿಂದ 3 ಎಕರೆ ಜಮೀನು ಖರೀದಿಸಿ ಲೇಔಟ್ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಿದೆ ಎಂದು, ಇದೇ ವೇಳೆ ಭರವಸೆ ನೀಡಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್.
50 ಕೋಟಿ ರೂಪಾಯಿ ತರುತ್ತೇವೆ!
ಮತ್ತೊಂದು ಕಡೆ ಚನ್ನಪಟ್ಟಣದ ಬಡವರಿಗೆ ನಿವೇಶನ ನೀಡಲು 50 ಕೋಟಿ ರೂ. ಹಣ ತಂದು 50 ರಿಂದ 100 ಎಕರೆ ಜಾಗದಲ್ಲಿ ಲೇಔಟ್ ಮಾಡ್ತೀವಿ. ಬಡವರಿಗೆ ಮನೆ ಕಟ್ಟಿಕೊಡಲಾಗುವುದು. ಮುಂದೆ ಇಲ್ಲಿ ನಮ್ಮ ಶಾಸಕರು ಆಯ್ಕೆ ಆಗುತ್ತಾರೆ. ಕನಿಷ್ಠ 10 ಸಾವಿರ ಜನರಿಗೆ ಸೈಟ್ ಹಂಚಿಕೆ ಮಾಡುತ್ತೇವೆ. ತಾಲೂಕಿನ 94% ಅಂದ್ರೆ ಸುಮಾರು 64 ಸಾವಿರ ಬಡ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇನ್ನು 7-8 % ಫಲಾನುಭವಿಗಳಿಗೆ ತಲುಪಬೇಕಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ನಲ್ಲಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಸಮೀಪ ಇರುವಾಗಲೇ ಮಹತ್ವದ ಹೇಳಿಕೆ, ಬೆಳವಣಿಗೆ ನಡೆಯುತ್ತಿವೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯುದ್ಧ ಶುರುವಾಗುವುದು ಪಕ್ಕಾ ಎಂಬ ಮಾತು ಕೇಳಿಬಂದಿದೆ. ಅದರಲ್ಲೂ ಈ ಕ್ಷೇತ್ರದಲ್ಲಿ ಗೆದ್ದು, ಮತ್ತೊಮ್ಮೆ ತಮ್ಮ ವಶಕ್ಕೆ ಪಡೆಯಬೇಕು ಎಂಬುದು ಕಾಂಗ್ರೆಸ್ ನಾಯಕರ ಗುರಿ ಆಗಿದೆ. ಈ ಕಾರಣಕ್ಕೆ, ಈ ತಿಕ್ಕಾಟದಲ್ಲಿ ಜಯ ಯಾರಿಗೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications