₹18,500 ಫೈನ್ ಇರುವ ಡಿಯೋ ರೈಡ್ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್!
ಬೆಂಗಳೂರು ನಗರಕ್ಕೆ ಉತ್ತರದ ಪ್ರವೇಶದ್ವಾರ ಎಂದೇ ಕರೆಸಿಕೊಂಡಿರುವ ಹೆಬ್ಬಾಳವು ಫ್ಲೈಓವರ್ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಪ್ರಮುಖ ಸ್ಥಳ. ಹೀಗಾಗಿ ಇಲ್ಲಿ ಮೇಲ್ಸೇತುವೆ ವಿಸ್ತರಣೆ ಮಾಡಿರುವ ಕಾಮಗಾರಿ ಪೂರ್ಣಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಅವರು ತಾವೇ ಖುದ್ದಾಗಿ ಡಿಯೋ ಸ್ಕೂಟರ್ ರೈಡ್ ಮಾಡುವ ಮೂಲಕ ಕಾಮಗಾರಿ ಪರಿಶೀಲನೆ ನಡೆಸಿ ಗಮನ ಸೆಳೆದಿದ್ದರು. ಈಗ ಇದೇ ವಿಚಾರ ಅವರನ್ನು ಪೇಚಿಗೆ ಸಿಲುಕಿಸಿದೆ. ಡಿಕೆ ಶಿವಕುಮಾರ್ ಅವರು ರೈಡ್ ಮಾಡಿದ ಡಿಯೋ ಬೈಕ್ ಮೇಲೆ ಬರೋಬ್ಬರಿ ₹18,500 ರೂಪಾಯಿ ದಂಡ ಬಾಕಿ ಇರುವ ಸಂಗತಿ ಬೆಳಕಿಗೆ ಬಂದಿದೆ.
ಹೌದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಹಳದಿ ಬಣ್ಣದ ಡಿಯೋ ಸ್ಕೂಟಿಯನ್ನು ಓಡಿಸುವ ಮೂಲಕ ಫ್ಲೈಓವರ್ ಕಾಮಗಾರಿಯನ್ನು ಪರಿಶೀಲಿಸಿದ್ದರು. ಡಿಕೆಶಿ ಗಾಡಿ ಹಿಂಬದಿಯಲ್ಲಿ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಕುಳಿತಿದ್ದರು. ಡಿಸಿಎಂ ಡಿಯೋ ಓಡಿಸುತ್ತಾ ಫೋಟೋಗೆ ಪೋಸ್ ಕೂಡ ಕೊಟ್ಟಿದ್ದರು. ಇಬ್ಬರೂ ಜಾಲಿ ರೈಡ್ ಮಾಡಿದ್ದ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಆ ಸ್ಕೂಟಿ ಮೇಲೆ ₹18,500 ಫೈನ್ ಇರುವ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ದಂಡ ಇದ್ದ ಸ್ಕೂಟರ್ ಅನ್ನು ಉಪಮುಖ್ಯಮಂತ್ರಿಗಳು ಓಡಿಸಿದ್ದಾರೆ ಟೀಕೆಯೂ ವ್ಯಕ್ತವಾಗುತ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಕೈಗೆತ್ತಿಕೊಂಡಿರುವ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಮೇಲ್ಸೇತುವೆ ಕಾಮಗಾರಿಯನ್ನು ಸಚಿವರಾದ ಬೈರತಿ ಸುರೇಶ್, ಶಾಂತಿನಗರ ಶಾಸಕರು ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಅವರು ಮತ್ತು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಡಿಕೆ ಶಿವಕುಮಾರ್ ಅವರು ಇದರ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈ ಸ್ಕೂಟಿಯ ನಂಬರ್ ಚೆಕ್ ಮಾಡಿದಾಗ ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇನ್ನು ಇದರ ದಂಡದ ಮೊತ್ತ ₹18,500 ಎಂದು ಜೆಡಿಎಸ್ ದಾಖಲೆ ಸಮೇತ ಹಂಚಿಕೊಂಡು, ಡಿಸಿಎಂ ಅವರನ್ನು ಟೀಕಿಸಿದೆ.
ಶೋಕಿ ಬಿಟ್ಟು ಸಚಿವರ ಜವಾಬ್ದಾರಿ ನಿರ್ವಹಿಸಿ
"ಶೋಕಿಲಾಲಾ, ರೀಲ್ಸ್ ರಾಜಾ ಮಿಸ್ಟರ್ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಬ್ಬಾಳ ಫ್ಲೈಓವರ್ ಮೇಲೆ ಚಾಲನೆ ಮಾಡಿದ KA 04 JZ 2087 ಸಂಖ್ಯೆಯ ದ್ವಿಚಕ್ರ ವಾಹನ ಸುಮಾರು 34ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ಇದರ ದಂಡದ ಮೊತ್ತ 18,500 ರೂಪಾಯಿ ಬಾಕಿ ಇದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ಪ್ರಚಾರಕ್ಕಾಗಿ ಫೋಟೋ ಶೂಟ್, ರೀಲ್ಸ್ ಶೋಕಿ ಬಿಟ್ಟು ಮೊದಲು ಸಚಿವ ಸ್ಥಾನದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದು ತಿರುಗೇಟು ನೀಡಿದೆ. ಇನ್ನು ಹೆಬ್ಬಾಳ ಸಂಚಾರ ಪೊಲೀಸರು ಕೂಡಲೇ KA 04 JZ 2087 ಸಂಖ್ಯೆಯ ದ್ವಿಚಕ್ರ ವಾಹನದ ದಂಡವನ್ನು ವಸೂಲಿ ಮಾಡುವ ಕೆಲಸ ಆಗಲಿ" ಎಂದು ಜೆಡಿಎಸ್ ಒತ್ತಾಯಿಸಿದೆ.












Click it and Unblock the Notifications