ಬೆಂಗಳೂರಿನ ಈ ಭಾಗದಲ್ಲಿ ಟ್ರಾಫಿಕ್‌ಗೆ ಮುಕ್ತಿ! ಡಿಸಿಎಂ ಕೊಟ್ರು ಸಿಹಿಸುದ್ದಿ
ಸಿಲಿಕಾನ್ ಸಿಟಿ ಹಾಗೂ ಐಟಿ ಹಬ್ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಟ್ರಾಫಿಕ್ ಸಿಟಿ ಎನ್ನುವ ಮತ್ತೊಂದು ಹೆಸರೂ ಇದೆ. ಬೆಂಗಳೂರಿನ ಬೆಳ್ಳಂದೂರು ಭಾಗದಲ್ಲಿ ಐಟಿ ಕಂಪನಿಗಳು ಹೆಚ್ಚಾಗಿರುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ.
ಈ ಬಗ್ಗೆ ಸಿಹಿಸುದ್ದಿ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ಬೆಳ್ಳಂದೂರಿನ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ರಕ್ಷಣಾ ಇಲಾಖೆಯ 22 ಎಕರೆ ಜಮೀನನ್ನು ಸರ್ಕಾರ ಖರೀದಿಸುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಇಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಹಿರಿಯ ಸೇನಾಧಿಕಾರಿ, ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಕೂಡ ಇದ್ದರು.

ಟ್ರಾಫಿಕ್‌ಗೆ ಮುಕ್ತಿ ನೀಡಲು ಜಮೀನು ಖರೀದಿಸುವ ಬಗ್ಗೆ ರಕ್ಷಣಾ ಇಲಾಖೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ಜಮೀನು ನೀಡುವ ಬಗ್ಗೆ ಮನವಿಯೂ ಮಾಡಿದ್ದೇನೆ. ಹಾಗಾಗಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಪರ್ಯಾಯ ರಸ್ತೆ ನಿರ್ಮಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ 12 ಎಕರೆ ಜಮೀನು ಕೊಡಲು ರಕ್ಷಣಾ ಇಲಾಖೆ ಕೂಡ ಒಪ್ಪಿದೆ ಎಂದಿದ್ದಾರೆ.
ಇದರ ಜೊತೆಗೆ ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕೂಡ ಕರೆದಿದ್ದೇನೆ. ಹೀಗಾಗಿ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಅವರನ್ನು ಕರೆದು ಧನ್ಯವಾದ ಹೇಳಿದ್ದೇನೆ. ಬೆಂಗಳೂರಿನ ಮತ್ತೊಂದು ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಹೆಬ್ಬಾಳ ಕಡೆಗೂ 10 ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಟ್ರಾಫಿಕ್ ಸಮಸ್ಯೆ ನೀಗಿಸಲು ಒಟ್ಟಾರೆಯಾಗಿ 22 ಎಕರೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬೆಂಗಳೂರು ನಗರದಲ್ಲಿ ಇನ್ನೂ ತುಂಬಾ ಗುಂಡಿಗಳಿವೆ. ಅವುಗಳ ದುರಸ್ತಿ ಮಾಡುತ್ತೇವೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಬಂಧ ಮತ್ತೊಂದು ಪರಿಶೀಲನಾ ಸಭೆ ಕರೆಯುತ್ತೇನೆ ಎಂದಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮ: ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ನೂರು ವರ್ಷಗಳಾಗಿವೆ. ಅದಕ್ಕಾಗಿ ಈ ಬಾರಿಯ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಚಿಂತಿಸಿದ್ದೇವೆ. ಮೊದಲ ಹಂತವಾಗಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲಾ, ತಾಲೂಕಿನ ಹಾಗೂ ಪಾಲಿಕೆಗಳ ಮಟ್ಟದಲ್ಲಿ ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
ಇದು ಒಂದು ಕಿ.ಮೀ ನಡಿಗೆ ಇರುತ್ತದೆ. ಬೆಂಗಳೂರಿನಲ್ಲಿ ಗಾಂಧಿ ಭವನದಿಂದ ಗಾಂಧಿ ಪ್ರತಿಮೆಯವರೆಗೂ ನಡಿಗೆ ಹಮ್ಮಿಕೊಂಡಿದ್ದೇವೆ. ಪಕ್ಷ ಭೇದ ಮರೆತು ಎಲ್ಲರೂ ಇದರಲ್ಲಿ ಭಾಗಿಯಾಗಬೇಕು. ಸ್ವಚ್ಛತೆಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದೇ ವೇಳೆ ಸ್ವಚ್ಛತೆ ಕಾಪಾಡಲು ಪ್ರತಿಜ್ಞೆ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಆ್ಯಪ್ ಸಹ ತಯಾರು ಮಾಡುತ್ತಿದ್ದೇವೆ. ಎಲ್ಲರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಸ್ವಚ್ಛತೆ ಬಗ್ಗೆ ನಾವು ಈ ಕಾರ್ಯಕ್ರಮ ಮಾಡುತ್ತೇವೆ. ಒಂದು ವರ್ಷ ಒಂದೊಂದು ಕಡೆ ಈ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications