ಬಡ ಕ್ಷೌರಿಕರ ನೆರವಿಗೆ ಸವಿತಾ ಸಮಾಜದ ನೆರವು: ಅಶ್ವಥ್ ನಾರಾಯಣರಿಂದ ಚಾಲನೆ
ಬೆಂಗಳೂರು ಏಪ್ರಿಲ್ 12: ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕ್ಷೌರಿಕ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ರಾಜ್ಯ ಸವಿತಾ ಸಮಾಜ ಮುಂದೆ ಬಂದಿದೆ.
ಸವಿತಾ ಜೀವ ಕಿರಣ ಎಂಬ ಯೋಜನೆಯನ್ನು ಆರಂಭಿಸಿರುವ ಕ್ಷೌರಿಕ ಸಮಾಜ ರಾಜ್ಯದ್ಯಂತ 3 ಸಾವಿರ ಕ್ಷೌರಿಕ ಕುಟುಂಬಗಳಿಗೆ ನೆರವು ನೀಡಲಿದೆ. ಇದರ ಮೊದಲ ಕಂತಾಗಿ ಇಂದು ಮೂರು ಸಾವಿರ ಕ್ಷೌರಿಕ ಸಮಾಜಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವ ಲಾರಿಗಳಿಗೆ ಡಿಸಿಎಂ ಅಶ್ವಥ್ ನಾರಾಯಣ ಅವರು ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘದವರು ಸಂಗ್ರಹಿಸಿರುವ ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ವಾಹನವನ್ನು ನಗರದಿಂದ ಬೀಳ್ಕೊಡಲಾಯಿತು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಂಚರಿಸಿ ಅಗತ್ಯದಲ್ಲಿರುವವರಿಗೆ ನೆರವು ಒದಗಿಸುವ ಈ ಕಾರ್ಯವನ್ನು ಶ್ಲಾಘಿಸುತ್ತೇನೆ.#IndiaFightsCorona pic.twitter.com/TR1ds81qHi
— Dr. Ashwathnarayan C. N. (@drashwathcn) April 12, 2020
ಲಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋರೋನಾ ರೋಗದ ಪರಿಣಾಮ ಜಗತ್ತೇ ಬಹಳ ತೊಂದರೆಯಲ್ಲಿ ಸಿಲುಕಿದೆ. ಈ ಸಮಯದಲ್ಲಿ ಎಲ್ಲಾ ಸಮುದಾಯಗಳು ಹಾಗೂ ವೃತ್ತಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿವೆ. ಕ್ಷೌರಿಕ ಸಮುದಾಯ ಕೂಡಾ ಬಹಳಷ್ಟು ತೊಂದರೆಗೆ ಈಡಾಗಿದೆ. ಈ ಸಮುದಾಯದ ಮುಖಂಡರುಗಳು ಬಡ ಕ್ಷೌರಿಕರ ಸಹಾಯಕ್ಕೆ ಬಂದಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಸಮುದಾಯದ ಸಮಸ್ಯೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸವಿತಾ ಸಮುದಾಯದ ರಾಜ್ಯಾಧ್ಯಕ್ಷರಾದ ಸಂಪತ್ ಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ರಾಜ್ಯದ 30 ಜಿಲ್ಲೆಗಳ ಕಡು ಬಡತನದಲ್ಲಿರುವ ಸವಿತಾ ಸಮಾಜದ ಬಂಧುಗಳಿಗೆ ದಿನಸಿಯನ್ನು ನೀಡುವ ಯೋಜನೆ ಸವಿತಾ ಜೀವ ಕಿರಣವನ್ನು ಪ್ರಾರಂಭಿಸಲಾಗಿದೆ. ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ರಾಜ್ಯದಲ್ಲಿ 8 ಲಕ್ಷ ಕುಟುಂಬಗಳು ಜೀವನ ಸಾಗಿಸಿಕೊಂಡು ಬರುತ್ತಿವೆ. ದಿನಗೂಲಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವುದು ಕಟುಸತ್ಯ.
ರಾಜ್ಯದಲ್ಲಿ ಇಂತಹ ಸುಮಾರು 1 ಲಕ್ಷ ಕ್ಕೂ ಹೆಚ್ಚು ಕ್ಷೌರಿಕ ವೃತ್ತಿದಾರರು ಮನೆಯಲ್ಲಿ ತೊಂದರೆ ಇರುವುದಾಗಿ ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೆ ದೂರವಾಣಿ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಕ್ಷೌರಿಕ ವೃತ್ತಿದಾರರಿಗೆ ನೆರವಾಗಬೇಕೆಂದು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಆದ ಕಾರಣ ಸವಿತಾ ಸಮಾಜದಲ್ಲಿರುವ ಹಣವನ್ನು ರಾಜ್ಯದ ಕ್ಷೌರಿಕ ಸಮುದಾಯದ ಬಂಧುಗಳ ನೆರವಿಗಾಗಿ ಮೊದಲನೆ ಹಂತವಾಗಿ 5 ಸಾವಿರ ಕುಟುಂಬಗಳಿಗೆ ರಾಜ್ಯಾದ್ಯಂತ ನೀಡಲು ಮುಂದಾಗಿ ಇಂದು ಲಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ಮುಂದೆ ಬಂದು ಇನ್ನುಳಿದ ಕ್ಷೌರಿಕ ಕುಟುಂಬಳಿಗೆ ನೆರವು ನೀಡಬೇಕೆಂದು ಇದೇ ಸಂಧರ್ಭದಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ರಾಜ್ಯಾಧ್ಯಕ್ಷ ಎಂ. ಸಂಪತ್ ಕುಮಾರ್, ಮುಖಂಡ ಸದಾನಂದ್, ಆಶೋಕ್ ಗಸ್ತಿ, ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಪಾಲ್ಗೊಂಡಿದ್ದರು.












Click it and Unblock the Notifications