ಅತ್ತೆ ಸಾಯಿಸಲು ಎರಡೇ ಎರಡು ಮಾತ್ರೆ ಕೇಳಿದ ಸೊಸೆಗೆ ಶಾಕ್ ಕೊಟ್ಟ ಡಾಕ್ಟರ್
ಬೆಂಗಳೂರು, ಫೆಬ್ರವರಿ 19: ಒಂದು ಕುಟುಂಬ ಅಂದ ಮೇಲೆ ಮನಸ್ತಾಪ, ಅಸಮಾಧಾನ ಸಾಮಾನ್ಯ. ಅದರಲ್ಲೂ ಅತ್ತೆ-ಸೊಸೆ ಜಗಳ ಸರ್ವೇ ಸಾಮಾನ್ಯ. ಮಾತಿಗೆ ಮಾತು ಬೆಳೆದು ಜಗಳವಾಡಿಕೊಳ್ಳುವುದು ಇದ್ದೇ ಇದೆ. ಅದಾದ ಮೇಲೆ ಕೆಲವರು ಬೇರೆ ಮನೆ ಮಾಡಿದರೆ, ಇನ್ನೂ ಕೆಲವರು ಆಗಿದ್ದಾಗಲಿ ಎಂದು ಜೊತೆಯಾಗಿ ಇರುತ್ತಾರೆ. ಆದರೆ ಈ ಜಗಳ ಎನ್ನುವುದು ಅಪರಾಧ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗಬಾರದು. ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರೊಬ್ಬರ ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದ ಒಬ್ಬರ ಜೀವ ಉಳಿದಿದೆ.
ಬೆಂಗಳೂರು ಮೂಲದ ವೈದ್ಯ ಡಾ. ಸುನಿಲ್ ಕುಮಾರ್ ಎನ್ನುವವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ ಮೂಲಕ ಡಾ. ಸುನಿಲ್ ಕುಮಾರ್ ಕೆಲ ರೋಗಿಗಳಿಗೆ ಸಲಗೆ ನೀಡುವಂತೆ ಈ ಮಹಿಳೆಯ ಜೊತೆ ಕೂಡ ಮಾತು ಆರಂಭಿಸಿದ್ದಾರೆ. ಈ ವೇಳೆ ಮಹಿಳೆ ವೈದ್ಯರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ಇದಾದ ಮೇಲೆ ನಡೆದ ಸಂಭಾಷಣೆ ಇಂಟ್ರಸ್ಟಿಂಗ್ ಆಗಿದ್ದು, ಮಹಿಳೆಯ ವಾಟ್ಸಾಪ್ ಸಂದೇಶ ಕಂಡು ಸ್ವತಃ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

ಇನ್ಸ್ಟಾಗ್ರಾಮ್ ಮೂಲಕ ಡಾ. ಸುನಿಲ್ ಕುಮಾರ್ ಅವರ ದೂರವಾಣಿ ಸಂಖ್ಯೆ ಪಡೆದ ಮಹಿಳೆ, ಫೆಬ್ರವರಿ 17ರಂದು ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಸಾಮಾನ್ಯವಾಗಿ ಮಾತು ಆರಂಭಿಸಿದ ಮಹಿಳೆ ಮೊದಲು ವೈದ್ಯರ ಯೋಗಕ್ಷೇಮ ವಿಚಾರಿಸಿದ್ದು, ಬಳಿಕ ಡಾ. ಸುನಿಲ್ ಕುಮಾರ್ ನೇರವಾಗಿ ಮೆಸೇಜ್ ಮಾಡಿದ ಉದ್ದೇಶವನ್ನು ಕೇಳಿದ್ದಾರೆ. ಈ ವೇಳೆ ಮಹಿಳೆ ಕೊಟ್ಟ ಕಾರಣ ಕೇಳಿ ವೈದ್ಯರೇ ದಂಗಾಗಿದ್ದಾರೆ.
'ನಿಮ್ಮ ಬಳಿ ಹೇಳಲು ಭಯವಾಗುತ್ತಿದೆ. ಅತ್ತೆಯನ್ನು ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತಾ. ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ಮಾತ್ರೆ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ?' ಎಂದು ಮಹಿಳೆ ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ವೈದ್ಯರ ಬಳಿ ವಾಟ್ಸಾಪ್ ಸಂದೇಶದ ಮೂಲಕ ಕೇಳಿದ್ದಾಳೆ.
ಮಹಿಳೆಯ ಮೆಸೇಜ್ ನೋಡಿ ಬೆಚ್ಚಿ ಬಿದ್ದ ವೈದ್ಯರು ನಾವು ಜೀವ ಉಳಿಸುವ ಜನ ಎಂದು ಹೇಳಿದ್ದಾರೆ. ವೈದ್ಯರು ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿ ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಮಹಿಳೆಯ ಆಲೋಚನೆಯಿಂದ ಶಾಕ್ ಆಗಿರುವ ವೈದ್ಯ ಸುನಿಲ್ ಕುಮಾರ್ ಮೆಸೇಜ್‌ಗಳು ಡಿಲೀಟ್ ಆಗುವ ಮೊದಲೇ ಎಲ್ಲವನ್ನೂ ಸ್ಕ್ರೀನ್ಶಾಟ್ ತೆಗೆದುಕೊಂಡು ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.












Click it and Unblock the Notifications