ನಗರದಲ್ಲಿ ಬೇಕಾಬಿಟ್ಟಿ ಬಿದ್ದಿರುವ ಕೇಬಲ್ ವೈರ್‌ಗಳಿಂದ ಅಮಾಯಕರ ಜೀವಕ್ಕೆ ಕಂಟಕ
ಬೆಂಗಳೂರು, ಮೇ 2: ಬೆಂಗಳೂರಿನ ಹಲವು ರಸ್ತೆಗಳಲ್ಲಿ ಕೇಬಲ್ ವೈರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಮಾಯಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ನಗರದ ಹಲವು ರಸ್ತೆಗಳು, ಪಾದಚಾರಿ ಮಾರ್ಗಗಳಲ್ಲಿ, ಕೇಬಲ್ ವೈರ್‌ಗಳು ಬೇಕಾಬಿಟ್ಟಿ ಬಿದ್ದಿದ್ದು, ಅದನ್ನ ತೆರವು ಮಾಡಿಸಲು ಈವರೆಗೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಇತ್ತೀಚೆಗಷ್ಟೇ 22 ವರ್ಷದ ಸಂಜಯ್ ಎಂಬಾತ ಇದೇ ಕೇಬಲ್ ವೈರ್‌ನಿಂದ ಬಂದ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ತೆರಳುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಇದು ಆಫ್ಟಿಕಲ್-ಫೈಬರ್ ಕೇಬಲ್ ಆಗಿದ್ದು, ಈ ವೈರ್‌ನ್ ರೂಟರ್‌ಗೆ ಸಂಪರ್ಕಿಸಲಾಗಿದೆ. ಆದರೆ ರೂಟರ್ ಕೆಲಸ ಮಾಡದ ಹಿನ್ನಲೆ ಹೆಚ್ಚುವರಿ ವಿದ್ಯುತ್ ತಂತಿಯ ಮೂಲಕ ವಿದ್ಯುತ್ ಹರಿದಿದೆ. ಇದರಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಕೇಬಲ್ ವೈರ್ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
"ಕೇಬಲ್ ಕಂಪನಿಗಳು ಹಳೆಯದನ್ನು ಅದೇ ಸ್ಥಳದಲ್ಲಿ ಬಿಡುವುದು ಮತ್ತು ಅವುಗಳನ್ನು ಹೊಸದರೊಂದಿಗೆ ಬದಲಾಯಿಸುವುದನ್ನ ಮಾಡುತ್ತಾರೆ. ಹೀಗಾಗಿ ಪ್ರತಿ ರಸ್ತೆಯಲ್ಲಿ ನೂರಾರು ಕೇಬಲ್‌ಗಳನ್ನ ಹಾಗೇ ಬಿದ್ದಿವೆ. ಸದ್ಯ ಬಿಬಿಎಂಪಿ ಈಗಲಾದರೂ ಎಚ್ಚೆತ್ತು ಅನವಶ್ಯಕವಾಗಿ ಬಿದ್ದಿರುವ ವೈರ್‌ಗಳನ್ನ ತೆರವು ಮಾಡಿದರೆ ಈ ರೀತಿ ಮತ್ತೊಂದು ಅಮಾಯಕ ಜೀವಗಳು ಸಾಯುವುದನ್ನ ತಪ್ಪಿಸಿದಂತಾಗುತ್ತದೆ," ಎಂದು ಸಂಜಯನಗರದ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ವಿಜ್ಞಾನಗೌಡ ಹೇಳಿದ್ದಾರೆ.

ನಗರದ ಇತರೆ ಪ್ರದೇಶಗಳಲ್ಲೂ ಇದೇ ರೀತಿಯ ದುರಾವಸ್ಥೆ ಇದೆ ಎಂದು ಮತ್ತೊಬ್ಬ ನಿವಾಸಿ ವಿಷ್ಣು ಪ್ರಸಾದ್ ಹೇಳಿಕೊಂಡಿದ್ದಾರೆ. "ನಗರದಲ್ಲಿ ಇದೊಂದು ಸಾರ್ವತ್ರಿಕ ಸಮಸ್ಯೆಯಾಗಿದೆ. ನಾನು ಆಫ್ಟಿಕಲ್ ಫೈಬರ್ ಕಂಪನಿ ವಿರುದ್ದ ದೂರುಗಳನ್ನು ಸಲ್ಲಿಸಿದ್ದೇನೆ ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಎರಡು ವರ್ಷಗಳ ಹಿಂದೆ ಓಎಫ್‌ಸಿ ನೀತಿಯನ್ನು ಹೊರತರುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಬಿಬಿಎಂಪಿಗೆ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಕೇಬಲ್‌ಗಳಿಗೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯೆಂದರೆ ಅನುಮತಿಯಿಲ್ಲದೆ ರಸ್ತೆಗಳ ನಿರಂತರ ಅಗೆಯುವುದು. ಕೇವಲ 1 ಅಥವಾ 2 ರಸ್ತೆಗಳನ್ನ ಅಗೆಯಲು ಅನುಮತಿ ಇರುತ್ತದೆ ಅದರೆ, 3 4 ರಸ್ತೆಗಳನ್ನ ಅಗೆದು ಕೇಬಲ್ ವೈರ್‌ಗಳನ್ನ ಅಳವಡಿಸುತ್ತಾರೆ. ಕೆಲವೊಮ್ಮೆ ಸರಿಯಾಗಿ ಕಾಮಗಾರಿಯೂ ಮಾಡದೇ ಹಾಗೆ ಬಿಡುವುದರಿಂದ ರಸ್ತೆ ಮಧ್ಯೆ ಅಥವಾ ಪಾದಚಾರಿ ಮಾರ್ಗಗಳಲ್ಲಿ ಕೇಬಲ್ ವೈರ್‌ಗಳ ರಾಶಿಯೇ ಬಿದ್ದಿರುತ್ತದೆ. ಇದರಿಂದ ನಾಗರಿಕರ ಜೀವಕ್ಕೂ ಅಪಾಯ," ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಕೇಬಲ್ ವೈರ್ ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸಲು ಆತಂಕ ಪಡುವ ಪರಿಸ್ಥಿತಿ ಇದೆ. ಏಕೆಂದರೆ ಯಾವ ಕೇಬಲ್ ಯಾವ ಕಂಪನಿಗೆ ಸೇರಿದೆ ಎಂಬುದು ನಮಗೆ ತಿಳಿದಿಲ್ಲ. ಸುಮಾರು 50 ರಿಂದ 100 ಕೇಬಲ್‌ಗಳು ರಸ್ತೆ ಅಡ್ಡಲಾಗಿ ಹಾದು ಹೋಗುತ್ತಿದ್ದು, ಅವುಗಳಲ್ಲಿ ಕೆಲವು ರಸ್ತೆಗಳಲ್ಲಿ ಬಿದ್ದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರು ಸಹ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಣಸವಾಡಿಯ ಮತ್ತೊಬ್ಬ ನಿವಾಸಿ ಆರೋಪಿಸಿದ್ದಾರೆ.

ಕೇಬಲ್ ವೈರ್‌ಗಳನ್ನ ತೆರವು ಮಾಡುವಂತೆ ಸಂಜಯನಗರ ನಿವಾಸಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಗೆದ್ದಲಹಳ್ಳಿ ಬಸ್ ನಿಲ್ದಾಣದ ಬಳಿ "ಹ್ಯಾಂಗಿಂಗ್ ಕೇಬಲ್‌ಗಳ ವಿರುದ್ದ ಸಮರ", "ಬಿಬಿಎಂಪಿ ನಮ್ಮನ್ನು ರಕ್ಷಿಸಿ, ನಮ್ಮನ್ನು ಕೊಲ್ಲಬೇಡಿ," ಎಂದು ಘೋಷಣಾ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಿದರು. ನಗರದಲ್ಲಿ ನೇತಾಡುತ್ತಿರುವ ಕೇಬಲ್ ವೈರಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕಂಪನಿಗಳು ಕಾನೂನುಬದ್ದವಾಗಿ ಕಾರ್ಯನಿರ್ವಹಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನಿಗದಿ ಪಡಿಸಬೇಕು. ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಸಂತ್ರಸ್ತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಆತನ ಸಹೋದರನಿಗೆ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸದ್ಯ ಇಷ್ಟೆಲ್ಲಾ ಬೆಳವಣಿಗೆಯ ನಂತರ ಬಿಬಿಎಂಪಿ ನಗರದ ರಸ್ತೆ, ಪಾದಚಾರಿ ಮಾರ್ಗ, ವಿದ್ಯುತ್ ಕಂಬ, ಮರಗಳ ಮೇಲೆ ಅಕ್ರಮವಾಗಿ ಓಎಫ್‌ಸಿ ಕೇಬಲ್ ವೈರ್ಗಳನ್ನ ಅಳವಡಿಸಲಾಗಿದೆ. ಇದು ಪಾದಚಾರಿಗಳ ಸಾವಿಗೆ ಕಾರಣವಾಗಬಹುದು. ಹೀಗಾಗಿ ಆಯಾ ವಲಯದ ವ್ಯಾಪ್ತಿಯಲ್ಲಿ ಅನಧಿಕೃತ ಒಎಫ್‌ಸಿ ಕೇಬಲ್‌ಗಳನ್ನು ಸಮರ್ಪಕವಾಗಿ ತೆರವುಗೊಳಿಸುವಂತೆ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications