ಗೆಳೆಯನನ್ನ ನಂಬಿ 7 ಕೋಟಿ ರೂಪಾಯಿ ಸೈಬರ್ ವಂಚನೆ ಜಾಲದಲ್ಲಿ ಸಿಲುಕಿದ ಬೆಂಗಳೂರು ವಿದ್ಯಾರ್ಥಿ
ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಗೆಳೆಯನನ್ನು ನಂಬಿ ಬರೋಬ್ಬರಿ 7 ಕೋಟಿ ರೂಪಾಯಿ ಸೈಬರ್ ವಂಚನೆಯ ಜಾಲದಲ್ಲಿ ಸಿಲುಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಷ್ಟಕಾಲದಲ್ಲಿ ನೆರವಾಗುವವನೇ ನಿಜವಾದ ಗೆಳೆಯ ಎಂಬ ಮಾತನ್ನು ನಂಬಿ ನಗರದ ಪ್ರತಿಷ್ಠಿತ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾನೆ. ತನ್ನ ಬ್ಯಾಂಕ್ ಖಾತೆಯನ್ನು ಸ್ನೇಹಿತನಿಗೆ ಬಳಸಲು ನೀಡಿ, ಕೋಟ್ಯಂತರ ರೂಪಾಯಿ ಸೈಬರ್ ವಂಚನೆಯಲ್ಲಿ ಸಿಲುಕಿದ್ದಾನೆ.
ನಡೆದಿದ್ದೇನು?
ವಿದ್ಯಾರ್ಥಿಗೆ ಸುಮಾರು ಒಂದು ವರ್ಷದಿಂದ ಆಯುಷ್ ಎಂಬಾತನ ಪರಿಚಯವಿತ್ತು. 2025ರ ನವೆಂಬರ್‌ನಲ್ಲಿ, ನನ್ನ ಬ್ಯಾಂಕ್ ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಅದು ಬ್ಲಾಕ್ ಆಗಿದೆ, ತುರ್ತಾಗಿ ನಿನ್ನ ಖಾತೆ ಬೇಕು ಎಂದು ಆಯುಷ್ ವಿದ್ಯಾರ್ಥಿಯನ್ನು ನಂಬಿಸಿದ್ದ. ಗೆಳೆಯನ ಮಾತನ್ನು ನಂಬಿದ ವಿದ್ಯಾರ್ಥಿ, ತನ್ನ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನು ಆತನಿಗೆ ನೀಡಿದ್ದಾನೆ.

ಕೇವಲ ಮಾಹಿತಿ ಮಾತ್ರವಲ್ಲದೆ, ಎಟಿಎಂ ಕಾರ್ಡ್‌ಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್. ನೆಟ್ ಬ್ಯಾಂಕಿಂಗ್ ಯೂಸರ್ ಐಡಿ (User ID) ಮತ್ತು ಪಾಸ್‌ವರ್ಡ್. ಇವೆಲ್ಲವನ್ನೂ ಆಯುಷ್‌ಗೆ ಕಳುಹಿಸಿಕೊಟ್ಟಿದ್ದಾನೆ. ಇದನ್ನು ಪಡೆದಿದ್ದಾಗಿ ಆಯುಷ್ ವಾಟ್ಸಾಪ್ ಮೂಲಕ ಖಚಿತಪಡಿಸಿದ್ದನು. ಕೆಲವು ತಿಂಗಳ ನಂತರ, ಬ್ಯಾಂಕ್ ಅಧಿಕಾರಿಗಳು ವಿದ್ಯಾರ್ಥಿಯನ್ನು ಸಂಪರ್ಕಿಸಿ ಆತನ ಖಾತೆಯಲ್ಲಿ ನಡೆಯುತ್ತಿರುವ ಸಂಶಯಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ವೇಳೆ, ಈ ಖಾತೆಯ ಮೂಲಕ ಸುಮಾರು 7 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದು ಮತ್ತು ಇದು ಸೈಬರ್ ವಂಚನೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ತಕ್ಷಣವೇ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ತಾನು ನಂಬಿದ ಸ್ನೇಹಿತನೇ ತನ್ನನ್ನು ವಂಚನೆ ಜಾಲಕ್ಕೆ ಬಳಸಿಕೊಂಡಿದ್ದಾನೆ ಎಂದು ಅರಿತ ವಿದ್ಯಾರ್ಥಿ ಕೂಡಲೇ ಪೊಲೀಸರ ಮೊರೆ ಹೋಗಿದ್ದಾನೆ. ಪ್ರಸ್ತುತ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ವಿದ್ಯಾರ್ಥಿ ನೀಡಿದ ದೂರಿನನ್ವಯ ಆಯುಷ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೈಬರ್ ವಂಚನೆಗಳ ಬಗ್ಗೆ ಎಚ್ಚರ
ನಿಮ್ಮ ಬ್ಯಾಂಕ್ ಖಾತೆ, ಓಟಿಪಿ (OTP), ಎಟಿಎಂ ಪಿನ್ ಅಥವಾ ನೆಟ್ ಬ್ಯಾಂಕಿಂಗ್ ವಿವರಗಳನ್ನು ಎಷ್ಟೇ ಆಪ್ತ ಸ್ನೇಹಿತರಾಗಿದ್ದರೂ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಯ ಮೂಲಕ ನಡೆಯುವ ಪ್ರತಿಯೊಂದು ವಹಿವಾಟಿಗೆ ಕಾನೂನುಬದ್ಧವಾಗಿ ನೀವೇ ಜವಾಬ್ದಾರರಾಗಿರುತ್ತೀರಿ. ಸ್ನೇಹಿತರೇ ಇರಲಿ ಅಥವಾ ಸಂಬಂಧಿಕರೇ ಇರಲಿ, ಈ ಕೆಳಗಿನ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ.
ಬ್ಯಾಂಕ್ ಖಾತೆ ವಿವರಗಳು, ಸಿಮ್ ಕಾರ್ಡ್ ಮತ್ತು ಓಟಿಪಿ, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಅನ್ನು ಬೇರೆಯವರಿಗೆ ಬಳಸಲು ಕೊಡಬೇಡಿ. ಓಟಿಪಿ ಅನ್ನು ಯಾರಿಗೂ ಹೇಳಬೇಡಿ. ನಿಮ್ಮ ಕೆವೈಸಿ ಅಪ್‌ಡೇಟ್ ಆಗಿಲ್ಲ, ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ" ಎಂಬ ಅಪರಿಚಿತ ಕರೆ ಅಥವಾ ಲಿಂಕ್‌ಗಳನ್ನು ನಂಬಬೇಡಿ. ಬ್ಯಾಂಕ್ ಎಂದಿಗೂ ಫೋನ್‌ನಲ್ಲಿ ಇಂತಹ ವಿವರ ಕೇಳುವುದಿಲ್ಲ.
ಇಂತಹ ವಂಚನೆಗಳಿಗೆ ಒಳಗಾದರೆ ಕೂಡಲೇ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ. ಅಥವಾ ವೆಬ್‌ಸೈಟ್ www.cybercrime.gov.in ಪೋರ್ಟಲ್‌ನಲ್ಲಿ ದೂರು ದಾಖಲಿಸಿ. ತಕ್ಷಣ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಖಾತೆಯನ್ನು ಫ್ರೀಜ್ ಮಾಡಿಸಿ. ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ನೀಡಿ.












Click it and Unblock the Notifications