ವಿಧಾನಸೌಧದಲ್ಲಿ 2 ರೂ.ಗೆ 20 ಲೀಟರ್ ಶುದ್ಧ ನೀರು
ಬೆಂಗಳೂರು, ಜು. 31 : ಎಲ್ಲಾ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ರಾಜ್ಯದ ಬಹುತೇಕ ಗ್ರಾಮೀಣ ಜನತೆ ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಧಾನ ಸೌಧದ ಔತಣ ಸಭಾಂಗಣದಲ್ಲಿ ಆಯೋಜಿಸಿದ್ದ ಶುದ್ಧ ಕುಡಿಯುವ ನೀರಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕರ್ನಾಟಕ ಪ್ರತಿ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರು ದೊರೆಯಬೇಕು. ಈ ಪ್ರಯತ್ನಕ್ಕೆ ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕೆರೆ ಮತ್ತು ಬಾವಿ ನೀರನ್ನು ಸೇವಿಸುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಅಂದಿನ ಕಾಲದ ಜನರಲ್ಲಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಶರೀರದಲ್ಲಿನ ರೋಗ ನಿರೋಧಕ ಶಕ್ತಿಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದಕ್ಕೆ ಶುದ್ಧ ಕುಡಿಯುವ ನೀರು ದೊರೆಯದಿರುವುದು ಕಾರಣ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ ಆರಂಭ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಧಾನ ಸೌಧದದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು. ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂದು ಹೇಳಿದರು.

2 ರೂಗೆ 20 ಲೀಟರ್ ನೀರು
ವಿಧಾನಸೌಧದಲ್ಲಿರುವ ಈ ಘಟಕದಲ್ಲಿ ಇನ್ನು ಮುಂದೆ 2 ರೂ. ಪಾವತಿ ಮಾಡಿದರೆ, 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯಲಿದೆ. ನೀರಿನಲ್ಲಿರುವ ಆರ್ಸೆನಿಕ್, ಫ್ಲೋರೈಡ್ ಮತ್ತಿತರ ರಾಸಾಯನಿಕಗಳನ್ನು ಶೋಧಿಸಿ, ಕುಡಿಯಲು ಯೋಗ್ಯವಾದ ನೀರನ್ನು ಈ ಘಟಕ ನೀಡಲಿದೆ.

300 ಘಟಕಗಳಿಗೆ ಚಾಲನೆ
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಗ್ರಾಮಗಳಲ್ಲಿ 300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಚಾಲನೆ ನೀಡಲಾಗಿದೆ. ಈ ಸಾಲಿನಲ್ಲಿ ಒಂದು ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

10 ಲಕ್ಷ ವೆಚ್ಚವಾಗುತ್ತದೆ
ಒಂದು ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆಗೆ 10 ಲಕ್ಷ ರೂ ವೆಚ್ಚವಾಗುತ್ತದೆ. ಸಂಘ ಸಂಸ್ಥೆಗಳು ನೀರಿನ ಘಟಕ ಆರಂಭಿಸಲು ಸಹಕಾರ ನೀಡಬೇಕು ಮತ್ತು ಶಾಸಕರೂ ಕೂಡ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಆರು ಸಾವಿರ ಘಟಕಗಳು ಬೇಕು
ರಾಜ್ಯಲ್ಲಿ ಶುದ್ಧ ಕುಡಿಯುವ ನೀರಿನ ಆರು ಸಾವಿರ ಘಟಕಗಳ ಅವಶ್ಯಕತೆ ಇದೆ. ಕಳೆದ ವರ್ಷ ಒಂದು ಸಾವಿರ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ ಒಂದು ಸಾವಿರ ಘಟಕಗಳನ್ನು ನಿರ್ಮಿಸಲು ಯೋಜನೆ ತಯಾರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.












Click it and Unblock the Notifications