ಬನ್ನೇರುಘಟ್ಟ ಬೋಟಿಂಗ್ ಕೊಳದಲ್ಲಿ ಮೊಸಳೆ: ಆಪರೇಷನ್ ಸಕ್ಸಸ್!
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬೋಟಿಂಗ್ ಕೊಳದಲ್ಲಿ ಅಡಗಿ ಕೂತಿದ್ದ ಮೊಸಳೆ ಹಿಡಿಯುವಲ್ಲಿ ಸಿಬ್ಬಂದಿ ಸಕ್ಸಸ್ ಆಗಿದ್ದಾರೆ. ನಿನ್ನೆ ಬೆಳಗ್ಗೆ ಬನ್ನೇರುಘಟ್ಟ (Bannerghatta) ಬೋಟಿಂಗ್ ಕೊಳದಲ್ಲಿ ಭಾರಿ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಆಗ ತಕ್ಷಣ ಅಲರ್ಟ್ ಆಗಿದ್ದ ಅಧಿಕಾರಿಗಳು ನಿನ್ನೆ ಪೂರ್ತಿ ದಿನ ಬೋಟಿಂಗ್ ನಿಲ್ಲಿಸಿ, ಆಪರೇಷನ್ ಮೊಸಳೆ ಶುರುಮಾಡಿದ್ದರು.
ಅಷ್ಟಕ್ಕೂ ಬೆಂಗಳೂರಿಗರ ಅಚ್ಚುಮೆಚ್ಚಿನ ಜಾಗ, ವನ್ಯಜೀವಿ ತಾಣ ಬನ್ನೇರುಘಟ್ಟ. ಬೆಂಗಳೂರಿನಿಂದ 30 ಕಿಲೋ ಮೀಟರ್ ದೂರದ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಪಿಕ್‌ನಿಕ್‌ಗಾಗಿ ಹೇಳಿ ಮಾಡಿಸಿದ ಜಾಗ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ವಾಸ ಇರುವ ಬಹುತೇಕ ಕುಟುಂಬಗಳು ಮಕ್ಕಳ ಜೊತೆ ವೀಕೆಂಡ್ ಸಮಯದಲ್ಲಿ ಇಲ್ಲಿಗೆ ಬಂದು ಕಾಲ ಕಳೆಯುತ್ತಾರೆ. ಆದರೆ ಬೋಟಿಂಗ್ ಮಾಡುವ ಕೊಳದಲ್ಲಿ ಮೊಸಳೆ ಕಂಡುಬಂದು ಆತಂಕ ಸೃಷ್ಟಿಯಾಗಿತ್ತು. ಇದೀಗ ಆತಂಕ ಕೊನೆಯಾಗಿದ್ದು, ಮೊಸಳೆಯನ್ನ ಯಶಸ್ವಿಯಾಗಿ ರಕ್ಷಿಸಲಾಗಿದೆ.

ಮೊಸಳೆ ಹಿಡಿದು ಕೆರೆಗೆ ಬಿಟ್ಟರು.
ನಿತ್ಯ ಸಾವಿರಾರು ಮಂದಿ ಬೋಟಿಂಗ್ ಮಾಡುವ ಕೊಳದಲ್ಲಿ ಭಾರಿ ಗಾತ್ರದ ಮೊಸಳೆ ಕಂಡಿದ್ದು ಸಹಜವಾಗಿ ಆತಂಕ ಮೂಡಿಸಿತ್ತು. ಬೆಳಗ್ಗೆ ಝೂ ತೆರೆಯುವುದಕ್ಕೂ ಮೊದಲು ಅಲ್ಲಿನ ಸಿಬ್ಬಂದಿ ಕಣ್ಣಿಗೆ ಬೋಟಿಂಗ್ ಕೊಳದಲ್ಲಿ ಏನೋ ಈಜಾಡುತ್ತಿರುವುದು ಗಮನಕ್ಕೆ ಬಂದಿತ್ತು. ಆ ಕೂಡಲೇ ಅಲರ್ಟ್ ಆದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗಲೇ ಗೊತ್ತಾಗಿದ್ದು ಬೋಟಿಂಗ್ ಕೊಳದಲ್ಲಿ ಮೊಸಳೆ ಇದೆ ಎಂಬ ವಿಚಾರ. ತಕ್ಷಣ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ, ಮೊಸಳೆ ರಕ್ಷಣೆ ಮಾಡುವ ಮೂಲಕ ಅದನ್ನ ಕಾಡಿನ ಒಳಗಿರುವ ಕೆರೆಗೆ ಬಿಡಲಾಗಿದೆ.
'ಆಪರೇಷನ್ ಮೊಸಳೆ' ಕಾರ್ಯಾಚರಣೆ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೆಚ್ಚಾಗಿ ಬರುವುದು ಮಕ್ಕಳು. ಮತ್ತೊಂದು ಕಡೆ ಮಕ್ಕಳೇ ಹೆಚ್ಚಾಗಿ ಬೋಟಿಂಗ್ ಪ್ರಿಯರಾಗಿದ್ದು, ಎಡವಟ್ಟು ನಡೆದುಹೋದರೆ ಕಷ್ಟ ಎಂಬ ಕಾರಣಕ್ಕೆ ಬೋಟಿಂಗ್ ಬಂದ್ ಮಾಡಲಾಗಿದೆ. ಮತ್ತೊಂದು ಕಡೆ ಮೊಸಳೆ ಹಿಡಿಯಲು ಕನಿಷ್ಠ 1 ದಿನ ಬೇಕಿತ್ತು. ಹೀಗಾಗಿ ಬನ್ನೇರುಘಟ್ಟ ಸಿಬ್ಬಂದಿ ಸಕಲ ವ್ಯವಸ್ಥೆ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಮೊಸಳೆ ಬಲೆಗೆ ಕೆಡವಿ, ಬೋಟಿಂಗ್ ನಡೆಸಲು ಮತ್ತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಇಲ್ಲಿಗೆ ಮೊಸಳೆ ಎಲ್ಲಿಂದ ಬಂತು ಎಂಬುದೇ ಕುತೂಹಲದ ಸಂಗತಿ.

ಕಾಡಿನ ಕೆರೆಯಿಂದ ಬಂದಿತ್ತು ಮೊಸಳೆ
'ಒನ್‌ಇಂಡಿಯಾ'ಗೆ ಈ ಕುರಿತು ಮಾಹಿತಿ ನೀಡಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಪನ್ವರ್, ಬನ್ನೇರುಘಟ್ಟದ ಒಳಗೆ 7 ಕೆರೆಗಳಿವೆ. ಈ ಎಲ್ಲಾ ಕೆರೆಗಳಲ್ಲಿ ಸಹಜವಾಗಿ ಮೊಸಳೆ ವಾಸಿಸುತ್ತವೆ. ಆದರೆ ಬಿಸಿಲ ಝಳಕ್ಕೋ ಅಥವಾ ಆಹಾರ ಹುಡುಕುತ್ತಲೋ ಮೊಸಳೆಯೊಂದು ಕಣ್ತಪ್ಪಿಸಿ ಬೋಟಿಂಗ್ ಕೊಳಕ್ಕೆ ಬಂದಿದೆ, ತಕ್ಷಣವೇ ಬೋಟಿಂಗ್ ನಿಲ್ಲಿಸಿದ್ದೇವೆ. ಕೂಡಲೇ ಮೊಸಳೆ ಹಿಡಿದು ಸೂಕ್ತ ಸ್ಥಳಕ್ಕೆ ಬಿಟ್ಟಿದ್ದೇವೆ. ಈ ಘಟನೆ ಬಗ್ಗೆ ಪ್ರವಾಸಿಗರು ಆತಂಕಪಡುವ ಅಗತ್ಯತೆ ಇಲ್ಲ ಎಂದಿದ್ದಾರೆ.

ಕೋಟಿ ಕೋಟಿ ಗಳಿಸುವ ಬನ್ನೇರುಘಟ್ಟ
ಕೊರೊನಾ ವಕ್ಕರಿಸಿದ ಸಂದರ್ಭದಲ್ಲಿ ಜಗತ್ತಿನ ಪ್ರತಿಯೊಂದು ಮೃಗಾಲಯವೂ ಸಂಕಷ್ಟಕ್ಕೆ ಸಿಲುಕಿತ್ತು. ಅದರಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೂಡ ಸಾಕಷ್ಟು ನಷ್ಟ ಅನುಭವಿಸಿತ್ತು. ಆದರೆ ಕಳೆದ 1 ವರ್ಷದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೋವಿಡ್ ಬಳಿಕ ಚೇತರಿಕೆ ಕಾಣುತ್ತಿದೆ. 2022-23ನೇ ವರ್ಷದಲ್ಲಿ ಬರೊಬ್ಬರಿ 2.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಈ ಮೂಲಕ 53 ಕೋಟಿ 89 ಲಕ್ಷ ಆದಾಯ ಸಂಗ್ರಹವಾಗಿದೆ. ಇದೀಗ ಪಾರ್ಕ್ ಮತ್ತಷ್ಟು ಅಭಿವೃದ್ಧಿಯಾಗಲು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ.












Click it and Unblock the Notifications