ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ ಐವರ ಬಂಧನ: ಪೊಲೀಸರ ಮುಂದೆ ಹಾಜರಾದ ಹ್ಯಾಕರ್ ಶ್ರೀಕಿ
ಬೆಂಗಳೂರು, ಡಿ. 13: ಬಿಟ್ ಕಾಯಿನ್ ರೂವಾರಿ ಹ್ಯಾಕರ್ ಶ್ರೀಕೃಷ್ಣ ಪ್ರತ್ಯಕ್ಷ. ಟೋಯಿಂಗ್ ವಾಹನಕ್ಕೆ ದಂಡ ವಿಧಿಸಿದ ಹೈಗ್ರೌಂಡ್ಸ್ ಸಂಚಾರ ಪೊಲೀಸರು. ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ ಐವರ ಬಂಧನ. ಇದು ಬೆಂಗಳೂರು ಅಪರಾಧ ಲೋಕದ ಸುದ್ದಿ ಚಿತ್ರಣ.
ಪತ್ರಕರ್ತ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಕೀರ್ತಿ ಹಾಗೂ ಬಂಧಿತರ ನಡುವೆ ಜಗಳ ಉಂಟಾಗಿದೆ. ಕಿರಿಕ್ ಕೀರ್ತಿಯ ವರ್ತನೆ ಗಲಾಟೆಗೆ ಪ್ರೇರಣೆ ನೀಡಿದ್ದು, ಹಲ್ಲೆ ಮಾಡಿದ ಐವರನ್ನು ಬಂಧಿಸಲಾಗಿದೆ.
ಅನಿಲ್, ವಿಜಯ್, ಅಜಯ್ ಸೇರಿದಂತೆ ಬಂಧಿತ ಐವರು ಡಿ. 2 ರಂದು ರಾತ್ರಿ ಪಬ್ ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಕಿರಿಕ್ ಕೀರ್ತಿ ಕೂಡ ಒಂದು ಟೇಬಲ್ ನಲ್ಲಿ ಕೂತಿದ್ದ. ಪಕ್ಕದ ಟೇಬಲ್ ನಲ್ಲಿ ಕೂತಿದ್ದ ಅನಿಲ್ ಮತ್ತು ವಿಜಯ್ ಸ್ನೇಹಿತರು ತಮ್ಮ ಪಾಡಿಗೆ ಮಾತನಾಡುತ್ತಿದ್ದರು. ಸೋಷಿಯಲ್ ಮಿಡಿಯಾ ಸೆಲಿಬ್ರಿಟಿ ಕಿರಿಕ್ ಕೀರ್ತಿ ನನಗೆ ಪರಿಚಯ ಎಂದು ಅನಿಲ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಜತೆಗಿದ್ದ ಸ್ನೇಹಿತರು ಹಾಗಿದ್ದರೆ ಹೋಗಿ ಮಾತನಾಡಿಸು ಎಂದು ಚಾಲೆಂಜ್ ಹಾಕಿದ್ದರು.
ಈ ವೇಳೆ ಕಿರಿಕ್ ಕೀರ್ತಿ ಬಳಿ ಬಂದ ಅನಿಲ್ , ನಾನು ಯಾರು ಅಂತ ಗೊತ್ತಾಯ್ತಾ ಎಂದು ತಮಾಷೆಗೆ ಕೇಳಿದ್ದಾರೆ. ಇಬ್ಬರು ಮಾತನಾಡುವುದನ್ನು ಅನಿಲ್ ಸ್ನೇಹಿತರು ವಿಡಿಯೋ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಕಿರಿಕ್ ಕೀರ್ತಿ, ನೀನು ಯಾರು ಅಂತ ಗೊತ್ತಿಲ್ಲ. ನನ್ನ ವಿಡಿಯೋ ಯಾಕೆ ಮಾಡ್ಕೋತೀರಾ ? ಎಂದು ಕಿರಿಕ್ ಮಾಡಿಕೊಂಡಿದ್ದಾನೆ. ಜತೆಗೆ ಏಕಾಏಕಿ ನಿಂದಿಸಿದ್ದಾರೆ. ಇದೇ ವಿಚಾರವಾಗಿ ಜಗಳ ನಡೆದು ಬೀರ್ ಬಾಟಲಿನಿಂದ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಟೋಯಿಂಗ್ ವಾಹನಕ್ಕೆ ದಂಡ ಹಾಕಿದ ಪೊಲೀಸರು:
ಸಂಚಾರ ನಿಯಮ ಉಲ್ಲಂಘನೆ ಮಾಡಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಟೈಗರ್ ವಾಹನಕ್ಕೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡಿದ್ದ ಟೈಗರ್ ವಾಹನ, ಚಾಲುಕ್ಯ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿತ್ತು. ಟೋಯಿಂಗ್ ವಾಹನ ಸಿಗ್ನಲ್ ಜಂಪ್ ಮಾಡಿದ್ದನ್ನು ಸ್ಥಳೀಯ ಪೊಲೀಸರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಲಾಗಿತ್ತು. ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಸೂಚನೆ ಹಿನ್ನೆಲೆಯಲ್ಲಿ ಟೋಯಿಂಗ್ ವಾಹನಕ್ಕೆ ಐದು ನೂರು ರೂಪಾಯಿ ದಂಡ ವಿಧಿಸಲಾಗಿದೆ.

ಹ್ಯಾಕರ್ ಶ್ರೀಕಿ ಹಾಜರು:
ಬಿಟ್ ಕಾಯಿನ್ ಪ್ರಕರಣದ ರೂವಾರಿ ಹ್ಯಾಕರ್ ಶ್ರೀಕೃಷ್ಣ ಪ್ರತ್ಯಕ್ಷವಾಗಿದ್ದಾನೆ. ಜಾಮೀನು ಬಳಿಕ ಕಣ್ಮರೆಯಾಗಿದ್ದ ಶ್ರೀಕೃಷ್ಣ ಯಾರಿಗೂ ಸಿಕ್ಕಿರಲಿಲ್ಲ. ರಾಯಲ್ ಆರ್ಕೀಡ್ ಹೋಟೆಲ್ ಸಿಬ್ಬಂದಿಗೆ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಬಂಧನಕ್ಕೆ ಒಳಗಾಗಿದ್ದ. ಇಡೀ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.
ಇದೇ ವೇಳೆ ಜಾಮೀನು ಪಡೆದು ಹೊರ ಬಂದಿದ್ದ ಹ್ಯಾಕರ್ ಶ್ರೀಕೃಷ್ಣ ಕಣ್ಮರೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಜೀವನ ಭೀಮಾನಗರ ಪೊಲೀಸರು ಮುಂದಾಗುತ್ತಿದ್ದಂತೆ, ಹ್ಯಾಕರ್ ಶ್ರೀಕೃಷ್ಣ ಜೀವನ ಭೀಮಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಿದ್ದಾನೆ. ಪುನಃ ಜನವರಿ ನಾಲ್ಕರಂದು ಠಾಣೆಗೆ ಹಾಜರಾಗಲು ಸೂಚಿಸಲಾಗಿದೆ.