ಹಸು ಕೆಚ್ಚಲು ಕೊಯ್ದ ಕೇಸ್: ಬೆಂಗಳೂರಲ್ಲಿ ಪ್ರಾಣಿ ರಕ್ಷಣೆಗೆ ಬಿಬಿಎಂಪಿಯಿಂದ ಹೊಸ ಅಭಿಯಾನ
Cow Horror Case: ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಲರ್ಟ್ ಆಗಿದ್ದು. ನಗರದಾದ್ಯಂತ ಪ್ರಾಣಿಗಳ ರಕ್ಷಣೆ ಹಾಗೂ ಪ್ರಾಣಿಗಳಿಗೆ ಹಾನಿ ಮಾಡಿದರೆ ಕಾನೂನಿನ ಪ್ರಕಾರ ಯಾವೆಲ್ಲ ಶಿಕ್ಷೆ ವಿಧಿಸಲಾಗುತ್ತದೆ ಎನ್ನುವ ಬಗ್ಗೆ ಬೆಂಗಳೂರಿನ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿದ್ದ ಹೇಯ ಕೃತ್ಯ ನಡೆದಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಜಾಗೃತಿ ಮೂಡಿಸಲಾಗುತ್ತಿದೆ. ಈಚೆಗಷ್ಟೇ ಬಿಬಿಎಂಪಿಯು ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಪ್ರಾಣಿಗಳ ಮೇಲೆ ಹಲ್ಲೆ, ದಾಳಿ ಅಥವಾ ಹಿಂಸೆ ಕೊಟ್ಟರೆ ಏನು ಕ್ರಮ ಆಗಲಿದೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಅದರ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಯಾವುದೇ ಪ್ರಾಣಿಗಳಿಗೆ ಹಿಂಸೆ ನೀಡಿದರೂ ಶಿಕ್ಷೆಯಾಗಲಿದೆ. ಅದರಲ್ಲಿ ಪ್ರಮುಖವಾಗಿ ಪ್ರಾಣಿಗಳನ್ನು ಸ್ಥಳಾಂತರಿಸುವುದು ಅಥವಾ ಅವುಗಳಿಗೆ ಆಹಾರ ಮತ್ತು ನೀರು ಸಿಗದಂತೆ ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು ಮಾಡಿದರೆ. ಬಿ.ಎನ್.ಎಸ್ ಸೆಕ್ಷನ್ 325ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿ ಮಾಡಿದರೆ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶವಿದೆ.

ಇನ್ನು ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ ಕೊಡುವುದು. ಅವರ ಮೇಲೆ ಗುಂಪು ಹಲ್ಲೆ ಮಾಡುವುದು ಮತ್ತು ಅವುಗಳಿಗೆ ಆಹಾರ ನೀಡುವುದನ್ನು ತಡೆಯುವುದು ಕ್ರಿಮಿನಲ್ ಬೆದರಿಕೆಯ ಅಡಿಯಲ್ಲಿ ಶಿಕ್ಷಾರ್ಹ ಮತ್ತು 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ.
ಜಾಗೃತಿ ಅಭಿಯಾನ: ಇನ್ನು ಬೆಂಗಳೂರಿನಲ್ಲಿ ಬಿಬಿಎಂಪಿಯು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಪ್ರಾಣಿಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದ 250 ಸ್ಥಳಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಬಿಬಿಎಂಪಿಯ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.
ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯ ಎನ್ನುವ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಗುರುವಾರ ಬಿಬಿಎಂಪಿಯ ಕೇಂದ್ರ ಕಚೇರಿ ಡಾ. ರಾಜ್‌ಕುಮಾರ್ ಗಾಜಿನ ಮನೆಯ ಬಳಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಸಮುದಾಯ (ಬೀಡಾಡಿ) ಪ್ರಾಣಿಗಳಿಗಾಗಿ ಪಾಲಿಕೆಯ ಪಶುಪಾಲನಾ ವಿಭಾಗದಿಂದ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಣಿಗಳ ಕುರಿತು ಯಾವೆಲ್ಲಾ ಕಾಯ್ದೆಗಳಿವೆ, ಸಾರ್ವಜನಿಕರು ಏನು ಮಾಡಬಹುದು-ಏನು ಮಾಡಬಾರದು, ಏನಾದರು ಸಮಸ್ಯೆಯಾದರೆ ಯಾರನ್ನು ಸಂಪರ್ಕಿಸಬೇಕು ಸೇರಿದಂತೆ ಎನ್ನುವುದು ಸೇರಿದಂತೆ ವಿವಿಧ ವಿಷಯಗಳನ್ನು ವಿವರಿಸಿದ್ದಾರೆ.
250 ಸ್ಥಳಗಳಲ್ಲಿ ಜಾಗೃತಿ: ಇನ್ನು ಬಿಬಿಎಂಪಿಯು ಬೆಂಗಳೂರಿನಲ್ಲಿ 250 ಸ್ಥಳಗಳಲ್ಲಿ ಸಮುದಾಯದ ಪ್ರಾಣಿಗಳ ಕುರಿತು ಜಾಗೃತಿ ಅಭಿಯಾನವನ್ನು ಆಯೋಜಿಸಿತ್ತು. ಇದಕ್ಕೆ ಬಿಬಿಎಂಪಿಯ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿತ್ತು. ಕಾರ್ಯಕ್ರಮದ ವೇಳಾಪಟ್ಟಿಯನ್ನು ಪಶುಪಾಲನಾ ವಿಭಾಗದ ಸಾಮಾಜಿಕ ಜಾಲತಾಣವಾದ Instagram ಹ್ಯಾಂಡಲ್ @bbmp_animalhusbandry ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ಅದರಲ್ಲಿ ಎಲ್ಲಾ ಮಾಹಿತಿ ಲಭ್ಯವಿರಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದಿ ನಾಟಕ/ನೃತ್ಯದ ಮೂಲಕ ಜಾಗೃತಿ: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಸಮುದಾಯದ ಪ್ರಾಣಿಗಳ ಕುರಿತು ಬೀದಿ ನಾಟಕ ಹಾಗೂ ಡ್ಯಾನ್ಸ್‌ನ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications