ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ಕಲಿಕೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಮೇ 19: ಮರುಕಳಿಸುತ್ತಿರುವ ಆತಂಕ ಒಡ್ಡಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವ ಉದ್ದೇಶದಿಂದ ಕೋವಿಡ್ ಸಂಕಷ್ಟದ ಕಾಲದಲ್ಲಿ ಶಿಕ್ಷಣದ ಮುಂದುವರಿಕೆ ಕ್ರಮಗಳ ಕುರಿತಂತೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಕೊರೋನಾ ಸೋಂಕಿನ ಭೀತಿಯಿಂದಾಗಿ 2021-22ನೇ ಶೈಕ್ಷಣಿಕ ವರ್ಷವೂ ನಿಗದಿಯಂತೆ ಆರಂಭವಾಗುವ ಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವುದು ಆ ಮೂಲಕ ಅವರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವುದು ಹಾಗೆಯೇ ಕಳೆದ ಸಾಲಿನಲ್ಲಿ ಕಲಿತ ಪಾಠದಂತೆ ನಮ್ಮ ಮಕ್ಕಳನ್ನು ತಲುಪಲು ಪರ್ಯಾಯ ಕ್ರಮಗಳನ್ನು ಅನುಸರಿಸಬೇಕೆಂಬ ಕುರಿತು ಈ ಸಮಿತಿಯು ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

ಕೊರೊನಾ ವಾರಿಯರ್ಸ್ ಅಂತ ಖಾಸಗಿ ಶಿಕ್ಷಕರ ಕಿವಿಗೆ ಹೂವು ಇಟ್ಟ ಕೊರೊನಾ ವಾರಿಯರ್ಸ್ ಅಂತ ಖಾಸಗಿ ಶಿಕ್ಷಕರ ಕಿವಿಗೆ ಹೂವು ಇಟ್ಟ "ಸಿಎಂ"

ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ಪರ್ಯಾಯ ಬೋಧನಾ ಹಾಗೂ ಕಲಿಕಾ ಕ್ರಮಗಳು ಪ್ರಾಮುಖ್ಯತೆ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ತಜ್ಞರ ತಂಡದಿಂದ ಸಲ್ಲಿಕೆಯಾಗುವ ವರದಿಯ ಆಧಾರದಲ್ಲಿ ಬರುವ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖವಾಗಲಾಗುವು. ಲಭ್ಯವಿರುವ ಸ್ಥಿತಿಗತಿಗಳು, ಮೌಲ್ಯಾಂಕನ ಪದ್ಧತಿ, ಮಂಡಳಿ ಪರೀಕ್ಷೆಗಳು, ಆನ್ ಲೈನ್ / ದೂರಶಿಕ್ಷಣ, ಶಿಕ್ಷಕರ ತರಬೇತಿ, ಸಂಪನ್ಮೂಲ ಸದ್ಬಳಕೆ ಸೇರಿದಂತೆ ಎಲ್ಲ ಆಯಾಮಗಳನ್ನೂ ಆಧ್ಯಯನ ಮಾಡಿ ವರದಿ ನೀಡಲು ಸಮಿತಿಯಲ್ಲಿ ಖ್ಯಾತ ವಿವಿಧ ಶಿಕ್ಷಣ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿನಿಧಿಗಳು, ನಿಮ್ಹಾನ್ಸ್ ಪ್ರತಿನಿಧಿಗಳು, ರಾಜ್ಯದ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು, ಖಾಸಗಿ ಶಾಲೆಗಳ ಪ್ರತಿನಿಧಿ, ಪೋಷಕ ಸಂಘಟನೆಯ ಪ್ರತಿನಿಧಿಗಳು, ಶಿಕ್ಷಕ/ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ತಕ್ಷಣದಲ್ಲೇ ಸಮಿತಿ ರಚಿಸಿ ಇಲಾಖೆ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿಯಲ್ಲಿ ನೀಲನಕ್ಷೆಯನ್ನು ಮಂಡಿಸಲು ಸಮಿತಿಯನ್ನು ಕೋರಲಾಗುವುದು ಎಂದು ಸಚಿವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರ ಮಂಗಳವಾರದ ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು, ಹಲವಾರು ರಾಜ್ಯಗಳು, ಅದರ ಅನುಷ್ಠಾನಕ್ಕೆ ಸಾಕಷ್ಟು ಪೂರ್ವಭಾವಿ ಕೆಲಸಗಳನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ‌ ಇದರ‌ ಬಗ್ಗೆ ವರದಿ ಸಲ್ಲಿಕೆಯಾದ ಬಳಿಕ ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳು ಅವಶ್ಯವಿದ್ದು, ರಾಜ್ಯ ಸಂಪನ್ಮೂಲ ತಂಡದ ರಚನೆಯೂ ಸೇರಿದಂತೆ ಇದರಲ್ಲಿ ಉಲ್ಲೇಖಿಸಿರುವ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

ಮೃತ ಶಿಕ್ಷಕರಿಗೆ ಪರಿಹಾರ- ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್

ಮೃತ ಶಿಕ್ಷಕರಿಗೆ ಪರಿಹಾರ- ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್

ಕೋವಿಡ್ ನಿಂದ ರಾಜ್ಯದ ವಿವಿಧೆಡೆ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಮೃತರಾಗಿರುವ ಕುರಿತು ಅಂಕಿ ಅಂಶಗಳನ್ನು ಮಂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕರ‌ ಕಲ್ಯಾಣ ನಿಧಿಯಿಂದ ವಿಶೇಷ ಪ್ರಕರಣವೆಂದು ಈ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ ಎಂದರು.


ಹಾಗೆಯೇ ಶಿಕ್ಷಕ ಸಮುದಾಯವನ್ನ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೆ ಮುನ್ನ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಲಸಿಕೆ‌ ನೀಡುವಲ್ಲಿ ಪ್ರಾಧಾನ್ಯತೆ ನೀಡಬೇಕಿದ್ದು, ಈ ಕುರಿತು ಆರೋಗ್ಯ ಇಲಾಖೆಗೆ ಕೂಡಲೇ‌ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸುರೇಶ್ ಕುಮಾರ್ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರೂ ಸಹ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತನಾಡುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಅರೋಗ್ಯ ಇಲಾಖೆಗೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಅನುಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ . ಅಲ್ಲದೇ, ಕೋವಿಡ್ ಮೂರನೇ ಅಲೆ ಅಪ್ಪಳಿಸಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಆರೋಗ್ಯ ಸಚಿವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದೂ ಸುರೇಶ್ ಕುಮಾರ್ ಹೇಳಿದರು.

ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ

ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ

ಈಗಾಗಲೇ ಶಿಕ್ಷಕರ ವರ್ಗಾವಣೆ ಬಹಳ ತಡವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಲಾಕ್ ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಶಿಕ್ಷಕರು ಇಲಾಖೆಯಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ಇದರಲ್ಲಿ ವಿಳಂಬ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಂಕನೂರ ನೇತೃತ್ವದ ಸಮಿತಿ ವರದಿ

ಸಂಕನೂರ ನೇತೃತ್ವದ ಸಮಿತಿ ವರದಿ

ಶಾಲಾಕಾಲೇಜುಗಳ ಆರ್.ಆರ್.ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವರದಿ‌ ಮಂಡಿಸಲು ರಚಿಸಲಾಗಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಸಮಿತಿ ವರದಿ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಈ ಕುರಿತ ಪ್ರಗತಿ ಪರಿಶೀಲಿಸಿ ವರ್ಚುವಲ್ ಮೂಲಕ ಸಭೆ ನಡೆಸಿ ಶೀಘ್ರವೇ ವರದಿ ನೀಡುವ ಸಂಬಂಧದಲ್ಲಿ ಸಂಕನೂರು ಅವರೊಂದಿಗೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾವೂ ಸಹ ಸಂಕನೂರು ಅವರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಶೀಘ್ರವೇ ವರದಿ ಕೋರುವುದಾಗಿ ತಿಳಿಸಿದರು.

ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ

ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ

ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಪೋರ್ಟಲ್ ದೀಕ್ಷಾ ಆಪ್ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳು ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಲು ಅನುವಾಗುವಂತೆ ಪಠ್ಯ ಭಾಗಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಪೋರ್ಟಲ್ ಆಗಿದ್ದು, ದೀಕ್ಷಾ ಪೋರ್ಟಲ್ ನಲ್ಲಿ ಅತಿ ಹೆಚ್ಚು ಪಠ್ಯ ಲಭ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಉತ್ತಮ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ 1ರಿಂದ 10ನೇ ತರಗತಿಗಳಿಗೆ ಅನ್ವಯವಾಗುವಂತೆ 22 ಸಾವಿರ ಇ-ಪಠ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಪಠ್ಯಪುಸ್ತಕಗಳು, ವರ್ಕ್ ಪುಸ್ತಕಗಳು, ತರಬೇತಿ ಪಠ್ಯಗಳು ಅಧ್ಯಾಯವಾರು ದೀಕ್ಷಾ ಆಪ್ ನಲ್ಲಿ ಲಭ್ಯವಿದೆ. ಹಾಗೆಯೇ ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆಯೂ ಪಠ್ಯರಚನೆ ಪೂರೈಸಿ ಆಪ್ ಗೆ ಅಪ್ ಲೋಡ್ ಮಾಡಲಾಗಿದೆ. ಪದವಿ ಪೂರ್ವ ಉಪನ್ಯಾಸಕರ ತರಬೇತಿ ಮಾಡ್ಯೂಲ್ ನ್ನು ಸಹ ಅಪ್ ಲೋಡ್ ಮಾಡಲಾಗುತ್ತಿದೆ. ಈ ಆಪ್ ನ ಬಳಕೆಯನ್ನು ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಸಚಿವರು ಕೋರಿದರು. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪರ್ಯಾಯ ಬೋಧನಾ ಕ್ರಮಗಳಿಗೆ ಆದ್ಯತೆ ಇರಲಿದ್ದು, ಈಗಿನಿಂದಲೇ ದೂರದರ್ಶನ, ಆಕಾಶವಾಣಿಯಂತಹ ಸಮೂಹ ಮಾಧ್ಯಮಗಳು ಸೇರಿದಂತೆ ತಂತ್ರಜ್ಞಾನಾಧಾರಿತ ಬೋಧನೆಯ ಸಂಪೂರ್ಣ ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ

ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ

ಭೌತಿಕವಾಗಿ ಶಾಲೆಗಳು ಆರಂಭವಾಗುವುದು ತಡವಾದರೂ ಸರಿಯೇ ಮಕ್ಕಳ ಕಲಿಕೆಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಬೇಕು ಎಂದು ಸಚಿವರು ಸೂಚಿಸಿದರು. ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿರುವ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣದ ಮಾಹಿತಿ ಪಡೆದ ಸಚಿವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಮಾರ್ಗಗಳನ್ನು ಆಲೋಚಿಸಬೇಕೆಂದು ಸಲಹೆ ನೀಡಿದರು.

Recommended Video

ಮಾನವೀಯತೆ ಮೆರೆದ Virat Kohli | Oneindia Kannada

English summary
The Minister of Education S. Suresh kumar said the learning program will be based on expert report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X