• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ಬಿಕ್ಕಟ್ಟು: 11ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಜೊತೆ ಡಿಸಿಎಂ ಮಾತುಕತೆ

|
Google Oneindia Kannada News

ಬೆಂಗಳೂರು, ಮೇ 17: ಕೋವಿಡ್-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಸೋಮವಾರ ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರ ಜತೆ ಮಹತ್ವದ ಮಾತುಕತೆ ನಡೆಸಿದರು.

ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಚುಯಲ್ ಸಭೆಯಲ್ಲಿ ಕೋವಿಡ್ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚ‌ರ್ಚೆ ನಡೆಸಲಾಯಿತು. ಅಮೆರಿಕ, ಕೆನಡಾ, ನೆದರ್‌ಲ್ಯಾಂಡ್ಸ್, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಆಸ್ಟ್ರೇಲಿಯಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲೆಂಡ್, ಜಪಾನ್‌ ಮುಂತಾದ ದೇಶಗಳ ದಕ್ಷಿಣ ಭಾರತ್‌ ಕಾನ್ಸುಲೇಟ್ ಜನರಲ್‌ಗಳ ಜತೆ ಡಿಸಿಎಂ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವಥ್ ನಾರಾಯಣ, ಕೋವಿಡ್‌ನಂಥ ಸೋಂಕಿನ ವಿರುದ್ಧ ಹೋರಾಟ ನಡೆಸಲು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ದೇಶಗಳ ಜತೆಗೆ ಎಲ್ಲ ರೀತಿಯ ಸಹಕಾರ ಸಂಬಂಧ ಹೊಂದಲು ಕರ್ನಾಟಕ ಸಿದ್ಧವಿದೆ ಎಂದರು.

3 ವಾರಗಳ ಹಿಂದೆ ರಾಜ್ಯದ ಎರಡನೇ ಅಲೆ ಅಪ್ಪಳಿಸಿದೆ. ಸರಕಾರವು ಸೋಂಕು ಹರಡುವುದಕ್ಕಿಂತ ವೇಗವಾಗಿ ಹಾಸಿಗೆ ನಿರ್ವಹಣೆ, ಆಮ್ಲಜನಕ ಪೂರೈಕೆ, ಔಷಧಿ ಲಭ್ಯತೆ, ಹೋಮ್‌ ಐಸೋಲೇಷನ್‌ನಂಥ ಪರಿಹಾರ ಕಾರ್ಯಗಳನ್ನು ಕೈಗೊಂಡು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಈಗ ಆಕ್ಸಿಜನ್, ಔಷಧಿ, ಬೆಡಗಳ ಕೊರತೆಯನ್ನು ಬಹುತೇಕ ನೀಗಿಸಲಾಗಿದೆ. ಮತ್ತೊಂದೆಡೆ ಸಂಭನೀಯ 3ನೇ ಅಲೆಯನ್ನು ಎದುರಿಸಲು ಸರಕಾರ ಸಜ್ಜಾಗಿದೆ ಎಂದು ಡಿಸಿಎಂ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೋಮ್‌ ಐಸೋಲೇಷನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಸೋಂಕಿತರಿಗೂ ಕೋವಿಡ್ ಕೇರ್‌ನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

Covid-19: DCM Ashwath Narayan Talks With Diplomats From More Than 11 Countries

ವಿವಿಧ ದೇಶಗಳ ನೆರವು ಹೀಗಿದೆ:
ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರು ಸಭೆಯಲ್ಲಿ ನೀಡಿದ ನೆರವಿನ ಮಾಹಿತಿ ಇಲ್ಲಿದೆ.

ಜಪಾನ್‌
ದಕ್ಷಿಣ ಭಾರತದ ಜಪಾನ್ ಕಾನ್ಸುಲೇಟ್ ಜನರಲ್‌ ಅಕಿಕೊ ಸುಗಿತಾ ಅವರು ಭಾರತ & ಕರ್ನಾಟಕಕ್ಕೆ ನೀಡಿರುವ ನೆರವಿನ ಮಾಹಿತಿ ನೀಡಿದರು. ಈಗಾಗಲೇ ರಾಜ್ಯದಲ್ಲಿದ್ದ ಬಹುತೇಕ ಜಪಾನಿಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಜಪಾನ್‌ ಸರಕಾರ ಭಾರತಕ್ಕೆ 50 ದಶಲಕ್ಷ ಡಾಲರ್ ಅನುದಾನ ಘೋಷಿಸಿದೆ. 800 ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ ಎಂದ ಅಕಿಕೊ ಸುಗಿತಾ ಅವರು, ಉತ್ಪಾದನಾ & ಅತ್ಯಗತ್ಯ ಕೈಗಾರಿಕೆಗಳ ಕಾರ್ಯಚಟುವಟಿಕೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮನವಿ ಮಾಡಿದರು. ಜಪಾನಿನ ಅನೇಕ ಕಂಪನಿಗಳು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಶಯ ಹೊಂದಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.

ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾದ ಕಾನ್ಸುಲೇಟ್ ಜನರಲ್‌ ಯಂಗ್ ಸೀಪ್ ಕ್ವಾನ್ ಅವರು ಮಾತನಾಡಿ, ಈಗಾಗಲೇ 1,500 ಕೊರಿಯನ್‌ ಪ್ರಜೆಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರವಾಗಬೇಕು ಎಂದು ವಿನಂತಿ ಮಾಡಿದರು.
ಜತೆಗೆ, ಜಾಗತಿಕ ಮಟ್ಟದಲ್ಲಿರುವ ಲಸಿಕೆಗಳ ಕೊರತೆಯನ್ನು ನೀಗಿಸಲು ವ್ಯಾಕ್ಸಿನ್ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಲು ದಕ್ಷಿಣ ಕೊರಿಯಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದ ಅವರು, ಭಾರತಕ್ಕೆ ಐದು ವಿಮಾನಗಳಲ್ಲಿ ವೈದ್ಯಕೀಯ ಸರಂಜಾಮುಗಳ ಪೂರೈಕೆ, ಆಮ್ಲಜನಕ ಸಿಲಿಂಡರ್‌ಗಳು, ವೈದ್ಯಕೀಯ & ತಪಾಸಣೆ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಸ್ತುಗಳು ಭಾರತಕ್ಕೆ ಬಂದಿವೆ. ಅಲ್ಲದೆ, ಇಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೊರಿಯಾದ ಎಲ್‌ಜಿ, ಸ್ಯಾಮ್‌ಸಂಗ್‌ ಮುಂತಾದವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿವೆ ಎಂದರು.

ಸ್ವಿಡ್ಜರ್‌ಲೆಂಡ್:
ಸ್ವಿಡ್ಜರ್‌ಲೆಂಡ್ ದೇಶದ ಕಾನ್ಸುಲೇಟ್ ಜನರಲ್ ಸೆಬಾಸ್ಟಿಯನ್ ಹಗ್‌ ಅವರು ಮಾತನಾಡಿ, ಭಾರತಕ್ಕೆ ಎಲ್ಲ ರೀತಿಯ ನೆರವು ಮತ್ತು ತಾಂತ್ರಿಕ ಮಾಹಿತಿ ಹಂಚಿಕೊಳ್ಳಲು ನಮ್ಮ ದೇಶ ಸಿದ್ಧವಿದೆ. ಭಾರತಕ್ಕೆ 13 ಟನ್ ವೈದ್ಯಕೀಯ ವಸ್ತುಗಳ ನೆರವು ನೀಡಲಾಗಿದೆ. 600 ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗಿದೆ. 40ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಭಾರತಕ್ಕೆ 7 ದಶಲಕ್ಷ ಸ್ವಿಸ್ ಫ್ರಾಂಕ್ಗಳಷ್ಟು ನೆರವು ಕೊಟ್ಟಿವೆ ಎಂದರು.
ಅಲ್ಲದೆ, ಜಾಗತಿಕ ಆವಿಷ್ಕಾರ ಪಾಲುದಾರ ಕೂಟದ ಸದಸ್ಯರು ಹೆಚ್ಚು ಹೆಚ್ಚು ಸಭೆಗಳನ್ನು ನಡೆಸುವ ಮೂಲಕ ನೆರವು ಮತ್ತು ಮಾಹಿತಿ ಹಂಚಿಕೆಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಸೆಬಾಸ್ಟಿಯನ್ ಹಗ್‌ ಸಲಹೆ ಮಾಡಿದರು. ಇದಕ್ಕೆ ಡಿಸಿಎಂ ಅವರು ಒಪ್ಪಿಗೆ ಸೂಚಿಸಿದರು.

ನೆದರ್‌ಲ್ಯಾಂಡ್ಸ್:‌
ಯಾವುದೇ ಸಂದರ್ಭದಲ್ಲೂ ನೆದರ್‌ಲ್ಯಾಂಡ್ಸ್ ಭಾರತದ ಜತೆ ಇರುತ್ತದೆ ಎಂದು ಆ ದೇಶದ ಕಾನ್ಸುಲೇಟ್‌ ಜನರಲ್‌ ಆದ ಗೆರ್ಟ್ ಹೈಜ್ಕೂಪ್ ಅವರು ಭರವಸೆ ನೀಡಿದರು. ಈಂಥ ಸಭೆಗಳನ್ನು ಹೆಚ್ಚೆಚ್ಚು ನಡೆಸಬೇಕು ಎಂದು ಸಲಹೆ ನೀಡಿದರಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ರಾಯಭಾರ ಕಚೇರಿ ಮತ್ತು ದೂತಾವಾಸದ ಸಿಬ್ಬಂದಿಯನ್ನು ಅಗತ್ಯ ಸಿಬ್ಬಂದಿ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕವು ಹಾಗೆ ಪರಿಗಣಿಸಬೇಕು ಎಂದು ಕೋರಿದರು
ಈಗಾಗಲೇ ನೆದರ್‌ಲ್ಯಾಂಡ್ಸ್ 3 ವಿಮಾನಗಳಷ್ಟು ವೈದ್ಯಕೀಯ ಸರಂಜಾಮುಗಳನ್ನು ಭಾರತಕ್ಕೆ ತಲುಪಿಸಿದೆ. ಫಿಲಿಪ್ಸ್ ಕಂಪನಿ ತಯಾರಿಸಿದ 10,000 ಆಮ್ಲಜನಕ ಸಾಂದ್ರಕಗಳನ್ನೂ ಕೂಡ ಒದಗಿಸಿದೆ ಎಂದು ಹೈಜ್ಕೂಪ್ ಮಾಹಿತಿ ನೀಡಿದರು.

ಅಮೆರಿಕ:
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚೆನ್ನೈನಲ್ಲಿರುವ ಅಮೆರಿಕನ್‌ ಕಾನ್ಸುಲೇಟ್ ಜನರಲ್‌ ಜುಡಿತ್ ರವಿನ್ ಅವರು, 100 ಮಿಲಿಯನ್ ಯುಎಸ್ ಡಾಲರ್‌ನಷ್ಟು ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಆಮ್ಲಜನಕ, ವೈದ್ಯಕೀಯ ಸರಂಜಾಮು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಿದೆ. ಇದೆಲ್ಲವನ್ನೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಲಕ ಕೊಡಲಾಗುತ್ತಿದೆ ಎಂದರು.
ಅಲ್ಲದೆ, ಭಾರತ-ಅಮೆರಿಕ ಜಂಟಿಯಾಗಿ ಕೋವಿಡ್‌ ಪರಿಹಾರ ನಿಧಿಗಾಗಿ ಕೆಲಸ ಮಾಡಲಿವೆ. ಭಾರತದಲ್ಲಿ 20 ದಶಲಲ್ಷ ಡೋಸ್ ಲಸಿಕೆ ತಯಾರಿಸಲು ಕೈಜೋಡಿಸಲಿದೆ ಎಂದು ಅವರು ತಿಳಿಸಿದರು.
ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಜುಡಿತ್ ರವಿನ್ ಮಾತನಾಡಿ, "70 ವರ್ಷಗಳ ಯುಎಸ್-ಭಾರತ ಆರೋಗ್ಯ ಸಹಭಾಗಿತ್ವವು ನಮ್ಮ ವಿಶಾಲ ಮತ್ತು ವಿಸ್ತರಿಸುತ್ತಿರುವ ದ್ವಿಪಕ್ಷೀಯ ಸಂಬಂಧದ ಒಂದು ಅಂಶವಾಗಿದೆ. ಯುನೈಟೆಡ್ ಸ್ಟೇಟ್ಸ್ ತನ್ನ ಅಗತ್ಯ ಸಮಯದಲ್ಲಿ ಭಾರತದೊಂದಿಗೆ ನಿಲ್ಲುತ್ತದೆ ಮತ್ತು ಸಹಾಯ ಮಾಡಲು ಸಿದ್ಧವಾಗಿರುತ್ತದೆ. ನಾವು ಮುಂಬರುವ ದಿನಗಳಲ್ಲಿ ದೀರ್ಘಕಾಲದವರೆಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.

Recommended Video

   ಯಾವ ವ್ಯಾಕ್ಸಿನ್ ಸೇಫ್ ? ಇಲ್ಲಿದೆ ಉತ್ತರ! | Oneindia Kannada

   ಜರ್ಮನಿ
   ಇನ್ನು ಇದೇ ಸಭೆಯಲ್ಲಿ ಮಾತನಾಡಿದ ಜರ್ಮನಿ ಕಾನ್ಸುಲೇಟ್ ಜನರಲ್‌ ಆಶಿಮ್ ಬರ್ಕಾಟ್ ಅವರು, ಸೋಂಕು ತಡೆಗಟ್ಟಲು ಕರ್ನಾಟಕದಲ್ಲಿ ಜಾರಿಗೆ ತಂದಿರುವ ಲಾಕ್‌ಡೌನ್‌ ಕ್ರಮ ಸರಿ ಇದೆ ಎಂದರಲ್ಲದೆ, ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಜರ್ಮನಿ ಸಿದ್ಧವಿದೆ ಎಂದರು. ಇಸ್ರೇಲ್‌ ಕಾನ್ಸುಲೇಟ್ ಜನರಲ್‌ ಜೋನಾಥನ್ ಝಡ್ಕಾ, ಕೆನಡಾದ ನಿಕೋಲಾಸ್ ಗೆರಾರ್ಡ್, ಡೆನ್ಮಾರ್ಕ್‌ನ ಜೆ. ಬೆಜೂರಿಮ್ ಹಾಗೂ ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ ಮುಂತಾದವರು ಮಾತನಾಡಿದರು.

   English summary
   Deputy Chief Minister Dr CN Ashwath Narayana on Monday held important talks with diplomats from the Global Invention Alliance (GIA).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X