KSRTC, BMTC ಬಸ್‌ಗಳಲ್ಲಿ ಯುಪಿಐ ಪಾವತಿ ಸಮಸ್ಯೆ: ಗೂಗಲ್ ಪೇ ವರ್ಕ್ ಆಗದೆ ಪ್ರಯಾಣಿಕರ ಪರದಾಟ
ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿದೆ. ಕಳೆದ ಎರಡು ವಾರಗಳಿಂದ ಕೆಎಸ್‌ಆರ್‌ಟಿಸಿಯ ಹಲವು ಪ್ರಮುಖ ಮಾರ್ಗಗಳಲ್ಲಿ ಫೋನ್ ಪೇ ಹೊರತುಪಡಿಸಿ ಉಳಿದ ಯುಪಿಐ ಆಧಾರಿತ ಪಾವತಿ ಆ್ಯಪ್‌ಗಳ ಬಳಕೆ ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿದೆ.
ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೆಚ್ಚಿದ ತೊಂದರೆ
ಬೆಂಗಳೂರಿನಿಂದ ಮೈಸೂರಿಗೆ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ನಗದು ಕೊಂಡೊಯ್ಯುವುದನ್ನು ಕಡಿಮೆ ಮಾಡಿದ್ದು, ಯುಪಿಐ ಪಾವತಿಯನ್ನೇ ನಂಬಿಕೊಂಡಿದ್ದಾರೆ. ಆದರೆ, ಬಸ್‌ಗಳಲ್ಲಿ ಟಿಕೆಟ್ ಪಡೆಯುವಾಗ ಗೂಗಲ್ ಪೇನಂತಹ ಆ್ಯಪ್‌ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪಾವತಿ ವಿಫಲವಾಗುತ್ತಿದೆ. ಇದರಿಂದಾಗಿ ಕೈಯಲ್ಲಿ ನಗದು ಇಲ್ಲದ ಪ್ರಯಾಣಿಕರು ಸಹ ಪ್ರಯಾಣಿಕರಿಂದ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿ ನಗದು ಪಡೆದು ನಿರ್ವಾಹಕರಿಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಎರಡು ವಾರಗಳಿಂದ ಈ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಎನ್‌ಪಿಸಿಐ ಗಮನಕ್ಕೆ ತಂದ ಕೆಎಸ್‌ಆರ್‌ಟಿಸಿ
ಈ ತಾಂತ್ರಿಕ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಉಪಮುಖ್ಯ ಗಣಕ ವ್ಯವಸ್ಥಾಪಕಿ ಸುಧಾರಾಣಿ ಅವರು, ಬೆಂಗಳೂರು-ಮೈಸೂರು ಮಾರ್ಗದ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದ ಒಟ್ಟಾರೆ ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ.
ಫೋನ್ ಪೇ ಹಾಗೂ ಗೂಗಲ್ ಪೇ ಎರಡೂ ಯುಪಿಐ ವೇದಿಕೆಗಳಾಗಿದ್ದರೂ ಅವುಗಳ ಸರ್ವರ್ ನೆಟ್‌ವರ್ಕ್‌ಗಳು ಭಿನ್ನವಾಗಿರುತ್ತವೆ. ಪ್ರಸ್ತುತ ಒಂದು ನಿರ್ದಿಷ್ಟ ನೆಟ್‌ವರ್ಕ್ ವಿಫಲವಾಗುತ್ತಿದ್ದು, ಇದನ್ನು ಮುಂದಿನ ಎರಡು ದಿನಗಳಲ್ಲಿ ಸರಿಪಡಿಸಿಕೊಡುವುದಾಗಿ ಎನ್‌ಪಿಸಿಐ ತಂತ್ರಜ್ಞರು ಭರವಸೆ ನೀಡಿದ್ದಾರೆ. ಸಂಸ್ಥೆಗೆ ಯುಪಿಐ ಆಧಾರಿತ ಪಾವತಿ ಮೂಲಕವೇ ಪ್ರತಿದಿನ ಸರಾಸರಿ 1.61 ಕೋಟಿ ರೂ. ವರಮಾನ ಬರುತ್ತಿದ್ದು, ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲೂ ಸಮಸ್ಯೆ
ಇತ್ತ ಸಿಲಿಕಾನ್ ಸಿಟಿಯ ಬಿಎಂಟಿಸಿ ಬಸ್‌ಗಳಲ್ಲೂ ಇದೇ ರೀತಿಯ ನೆಟ್‌ವರ್ಕ್ ಸಮಸ್ಯೆ ತಲೆದೂರಿದೆ. ಬಿಎಂಟಿಸಿ ಬಸ್‌ಗಳಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ವ್ಯವಸ್ಥೆ ಹೊಂದಿರುವ ಹೊಸ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪರಿಚಯಿಸಿದ ಬಳಿಕ ಆಗಾಗ ಸರ್ವರ್ ದೋಷ ಉಂಟಾಗುತ್ತಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಆಗದಿದ್ದಾಗ ಹಣ ನೀಡುವಂತೆ ನಿರ್ವಾಹಕರು ಒತ್ತಾಯಿಸುತ್ತಿದ್ದಾರೆ. ಹಣವಿಲ್ಲದಿದ್ದಾಗ ಬಸ್‌ನಿಂದ ಕೆಳಗೆ ಇಳಿಯುವಂತೆ ನಿರ್ವಾಹಕರು ಗದರುತ್ತಿದ್ದಾರೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ, ಡಿಜಿಟಲ್ ಇಂಡಿಯಾ ಯುಗದಲ್ಲಿ ತಾಂತ್ರಿಕ ದೋಷದಿಂದಾಗಿ ಸಾರ್ವಜನಿಕ ಸಾರಿಗೆ ಅವಲಂಬಿಸಿರುವ ಸಾಮಾನ್ಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.












Click it and Unblock the Notifications