ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥ
ಬೆಂಗಳೂರು, ಜುಲೈ 11: ನಗರದ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಮನೆಯೊಂದರಲ್ಲಿ ದಂಪತಿಯ ಮೃತ ದೇಹಗಳು ಶೌಚಾಲಯದಲ್ಲಿ ಪತ್ತೆಯಾಗಿದ್ದು, ವಿಶಾನಿಲ ಸೇವನೆಯಿಂದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ.
ಪಟ್ಟಣಗೆರೆ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಮಹೇಶ್ (35) ಪತ್ನಿ ಶೀಲಾ (30) ಮೃತ ದಂಪತಿಗಳು. ದಂಪತಿಗಳಿಗೆ ಜಾಹ್ನವಿ (6) ಸಾಕ್ಷಿ (4) ವರ್ಷದ ಮಕ್ಕಳಿದ್ದಾರೆ.
ನಿನ್ನೆ ಸಂಜೆ ಎಂದಿನಂತೆ ಶಾಲೆಯಿಂದ ವಾಪಾಸ್ ಬಂದ ಮಕ್ಕಳು ಮನೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಇದರಿಂದ ಇಬ್ಬರೂ ಮಕ್ಕಳು ಪಕ್ಕದ ಮನೆಗೆ ಹೋಗಿ ಕಾದಿದ್ದಾರೆ ಎಷ್ಟು ಹೊತ್ತಾದ್ದರೂ ಮನೆಯ ಬಾಗಿಲು ತೆರೆಯದಾಗ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಬಂದು ಮನೆಯ ಬಾಗಿಲು ಒಡೆದು ಒಳ ನೋಡಿದಾಗ ಶೌಚಾಲಯದಲ್ಲಿ ಇಬ್ಬರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡಿದೆ. ಇಬ್ಬರ ದೇಹದ ಮೇಲೂ ಯಾವುದೇ ಗಾಯಗಳಿರಲಿಲ್ಲ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಲ್ಯಾಪ್‌ಟಾಪ್‌ನಲ್ಲಿ ನೋಡುತ್ತಿದ್ದ ಸಿನಿಮಾವನ್ನು ಪಾಸ್ ಮಾಡಲಾಗಿದೆ, ಮೃತ ದೇಹದ ಮೇಲೆ ಯಾವುದೇ ಗಾಯಗಳೂ ಇಲ್ಲ, ಸಾಯುವ ಮುನ್ನಾ ಒದ್ದಾಡಿದ ಕುರುಹುಗಳೂ ಇಲ್ಲ, ಹೊರಗಿನವರಿಗೆ ಯಾವುದೇ ಕಿರುಚಾಟ, ಕೂಗಾಟ ಕೇಳಿಲ್ಲ ಹಾಗಾಗಿ ಇದು ಕೊಲೆಯಲ್ಲ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶೌಚಾಲಯದಲ್ಲಿ ವಿದ್ಯುತ್ ಹಾಗೂ ಗ್ಯಾಸ್ ಗೀಸರ್ ಇದ್ದು, ಅದರಲ್ಲಿ ಗ್ಯಾಸ್ ಗೀಸರ್ ಆನ್ ಆಗಿದೆ. ಅದರಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ಸೇವಿಸಿರುವ ಕಾರಣ ಇಬ್ಬರೂ ಅಸುನೀಗಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ, ಸ್ನಾನ ಗೃಹಕ್ಕೆ ಉತ್ತಮ ವೆಂಟಿಲೇಟರ್ ವ್ಯವಸ್ಥೆಯೂ ಇರಲಿಲ್ಲವೆಂದು ಪೊಲೀಸರು ಹೇಳಿದ್ದಾರೆ. ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಸಾವಿಗೆ ನಿಜ ಕಾರಣ ತಿಳಿಯಲಿದೆ.












Click it and Unblock the Notifications