ಭುಗಿಲೆದ್ದ ವಿವಾದ; ಯಲಹಂಕ ಫ್ಲೈ ಓವರ್ ಉದ್ಘಾಟನೆ ಮೂಂದೂಡಿಕೆ
ಬೆಂಗಳೂರು, ಮೇ 27 : ಕರ್ನಾಟಕದಲ್ಲಿ ಬುಧವಾರ ಭಾರಿ ಚರ್ಚೆಗೆ ಕಾರಣವಾಗಿದ್ದು ಬೆಂಗಳೂರಿನ ಯಲಹಂಕದ ಫ್ಲೈ ಓವರ್ ಉದ್ಘಾಟನಾ ಕಾರ್ಯಕ್ರಮ. ಮೇಲುಸೇತುವೆಗೆ 'ವೀರ ಸಾವರ್ಕರ್' ಹೆಸರು ಇಡುವುದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಆಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಬೆಳಗ್ಗೆ 9.30ಕ್ಕೆ ನಡೆಯಬೇಕಿದ್ದ ಫ್ಲೈ ಓವರ್ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.
ಬೆಂಗಳೂರಿನ ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮದರ್ ಡೈರಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಮೇಲುಸೇತುವೆ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಿಗದಿಯಾಗಿತ್ತು.

ಕೋವಿಡ್ - 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಈ ವೇಳೆ ಜನರು ಹೆಚ್ಚಾಗಿ ಸೇರುತ್ತಾರೆ ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವರ ಟ್ವೀಟ್: 'ಕೆಲವು ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ಯಲಹಂಕ ಮೇಲ್ಸೇತುವೆ ವೀರಸಾವರ್ಕರ್ ಹೆಸರಿಡುವುದನ್ನು ಮುಂದೂಡಲಾಗಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಟ್ವೀಟ್ ಮಾಡಿದ್ದಾರೆ.
ಶಾಸಕರ ಸ್ಪಷ್ಟನೆ : ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಯಾವುದೇ ಟೀಕೆ ಟಿಪ್ಪಣಿಗಳಿಗೂ ಕಿವಿಗೊಡಬೇಡಿ ವೀರ ಸಾವರ್ಕರ್ ಹೆಸರು ಶತಸಿದ್ಧ ಕೇವಲ ಉದ್ಘಾಟನೆಯಷ್ಟೇ ಮುಂದೂಡಲಾಗಿದೆ, ಜನತೆ ಸಹಕರಿಸಬೇಕಾಗಿ ವಿನಂತಿ ಎಂದು ಹೇಳಿದ್ದಾರೆ.












Click it and Unblock the Notifications