ಸಿದ್ದರಾಮಯ್ಯಗೆ ಸಖತ್ ಟಾಂಗ್ ಕೊಟ್ರಾ ಡಿಕೆಶಿ?
ವ್ಯಕ್ತಿ ಪೂಜೆಯನ್ನು ಕೈಬಿಟ್ಟು ಪಕ್ಷದ ಪೂಜೆಯನ್ನು ಮಾಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಜೂನ್ 12ರಂದು ನಡೆದ ಕಾಂಗ್ರೆಸ್ ಸಮಾಲೋಚನ ಸಭೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಿವಿಮಾತು.
ಬೆಂಗಳೂರು, ಜೂನ್ 12: ಇದೇನು ಕಿವಿಮಾತೋ ಅಥವಾ ಕಾಲೆಳೆದಿದ್ದೋ ಖುದ್ದು ಡಿ.ಕೆ. ಶಿವಕುಮಾರ್ ಅವರೇ ಹೇಳಬೇಕು. ನಗರದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಅವರು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸಮಾಲೋಚನ ಸಭೆಯಲ್ಲಿ ಮಾತನಾಡಿದ ಇಂಧನ ಸಚಿವರೂ ಆದ ಡಿಕೆಶಿ, ಮುಂದಿನ ಚುನಾವಣೆಗೆ ಸಿದ್ಧರಾಗುವ ವಿಚಾರದಲ್ಲಿ ಯಾವುದಕ್ಕೆ ಗಮನ ಕೊಡಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಹಾಗೆ ಮಾತನಾಡುತ್ತಾ, ''ವ್ಯಕ್ತಿ ಪೂಜೆಯನ್ನು ಮಾಡುವ ಬದಲು ಪಕ್ಷ ಪೂಜೆ ಮಾಡಿದರೆ, ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆ'' ಎಂದು ಹೇಳಿರುವುದು ಕಾರ್ಯಕರ್ತರಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟುಹಾಕಿತು.
ಕೆಪಿಸಿಸಿ ಅಧ್ಯಕ್ಷರಾಗುವ ಅವರ ಕನಸು ಇತ್ತೀಚೆಗೆ ಸರಿದು ಹೋಗಿದ್ದು ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆಯಿಂದಲೇ ಎಂದು ಹೇಳಲಾಗುತ್ತಿದೆ. ಇದನ್ನು ನಂಬಿಕೊಂಡವರಿಗೆ ಡಿಕೆಶಿಯವರು ಸಮಾಲೋಚನಾ ಸಭೆಯಲ್ಲಿ ನೀಡಿರುವ ಈ ಹೇಳಿಕೆ ಅಪಾರ್ಥವಾಗಿ ಕಾಣಬಹುದು. ಇಲ್ಲವಾದರೆ, ಇದರಲ್ಲೇನೂ ಲೋಪವಾಗಿ ಕಾಣಲಾಗುವುದಿಲ್ಲ.












Click it and Unblock the Notifications