ಎಸ್.ಎಂ.ಕೃಷ್ಣ ಮನೆ ತಲುಪಿದ ಕಾಂಗ್ರೆಸ್ ಬಂಡಾಯ!

ಬುಧವಾರ ಸಂಜೆ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಬ್ಬರು ಮಾತ್ರ ಸಚಿವ ಸಂಪುಟ ಸೇರುತ್ತಿರುವುದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. [ಸಚಿವ ಸಂಪುಟ ವಿಸ್ತರಣೆ, ಅಸಮಾಧಾನ ಸ್ಫೋಟ]
ಮಂಗಳವಾರ ಬೆಳಗ್ಗೆಯಿಂದಲೂ ಸಿಎಂ ಸಿದ್ದರಾಮಯ್ಯ ಯಾವುದೇ ಶಾಸಕರನ್ನು ಭೇಟಿಯಾಗಿಲ್ಲ. ತಮ್ಮ ಭೇಟಿಗೆ ಬಂದ ಶಾಸಕರಿಗೂ ಸಿಎಂ ಕೈಗೆ ಸಿಕ್ಕಿಲ್ಲ. ಇದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಕೆಲವು ಶಾಸಕರು ಎಸ್.ಎಂ.ಕೃಷ್ಣ ಮನೆಗೆ ತೆರಳಿ ದೂರು ನೀಡಿದ್ದಾರೆ. ಮತ್ತೆ ಕೆಲವು ಶಾಸಕರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. [ಡಿಕೆಶಿ, ಬೇಗ್ ಸಂಪುಟಕ್ಕೆ: ಸಾಹಿತಿ ಅನಂತಮೂರ್ತಿ ಆಕ್ಷೇಪ]
ಪರಮೇಶ್ವರ್ ಅಖಾಡಕ್ಕೆ : ಸಂಪುಟ ವಿಸ್ತರಣೆ ಅಸಮಾಧಾನದಿಂದ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಖಾಡಕ್ಕೆ ಇಳಿದಿದ್ದಾರೆ. ಎಸ್.ಎಂ.ಕೃಷ್ಣ ಮನೆಗೆ ತೆರಳಿದ ಅವರು, ಪಕ್ಷದ ವಿದ್ಯಾಮಾನಗಳ ಕುರಿತಂತೆ ಮಾಹಿತಿ ನೀಡಿ ಅವರಿಂದ ಸಲಹೆಗಳನ್ನು ಪಡೆದಿದ್ದಾರೆ.
ಕೃಷ್ಣ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವೇಳೆ ಶಾಸಕರ ಅಸಮಾಧಾನ ಸಹಜ, ಅವರನ್ನು ಸಮಾಧಾನ ಪಡಿಸುವುದು ನನ್ನ ಕೆಲಸ ಎಂದರು. ಹೈಮಾಂಡ್ ನಿರ್ದೇಶನದಂತೆ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಜನರ ಆಶಯಕ್ಕೆ ಧಕ್ಕೆ ಬಾರದಂತೆ ಸರ್ಕಾರ ಮುನ್ನಡೆಯುತ್ತದೆ ಎಂದು ಹೇಳಿದರು.
ಗರಿಷ್ಠ 34 ಸದಸ್ಯ ಬಲದ ರಾಜ್ಯ ಸಚಿವ ಸಂಪುಟದಲ್ಲಿ 5 ಸ್ಥಾನಗಳು ಮಾತ್ರ ಖಾಲಿ ಇವೆ. ಸದ್ಯ ಎರಡು ಸ್ಥಾನಗಳನ್ನು ಮಾತ್ರ ಸಿಎಂ ಭರ್ತಿ ಮಾಡಲು ಮುಂದಾಗಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಭಾಗದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂದು ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ಒತ್ತಾಯಿಸಿದ್ದರೆ, ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ತಮಗೆ ಅವಕಾಶ ನೀಡದಿದ್ದರೆ ಅದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಮೇಶ್ ಕುಮಾರ್, ಮೋಟಮ್ಮ, ವೀರಣ್ಣ ಮತ್ತೀಕಟ್ಟಿ, ಎಚ್.ವೈ.ಮೇಟಿ, ಮನೋಹರ ತಹಶೀಲ್ದಾರ್, ಮಾಲೀಕಯ್ಯ ಗುತ್ತೇದಾರ್ ಮುಂತಾದವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು ಸಚಿವರಾಗಲು ಸಿದ್ಧರಾಗಿದ್ದಾರೆ. ಸಚಿವ ಸ್ಥಾನ ಅಲಂಕರಿಸಲು ಪಕ್ಷದಲ್ಲಿ ಸಾಕಷ್ಟು ಸಮರ್ಥ ವ್ಯಕ್ತಿಗಳಿದ್ದಾರೆ. ಪ್ರದೇಶವಾರು, ಜಾತಿವಾರು ಸಮತೋಲನದ ದೃಷ್ಠಿಯಿಂದ ಇಬ್ಬರು ಶಾಸಕರನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.












Click it and Unblock the Notifications