ಸಚಿವ ಸ್ಥಾನ ನಿರಾಕರಿಸಲಾಗಿರುವ ಕಾಂಗ್ರೆಸ್ ಶಾಸಕರಿಂದ ಬಿಡಿಎ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಲಾಬಿ- ಯಾವ ಶಾಸಕರು ತಿಳಿಯಿರಿ
ಬೆಂಗಳೂರು, ಮೇ 29: ಕರ್ನಾಟಕ ಕ್ಯಾಬಿನೆಟ್ ಖಾತೆ ಹಂಚಿಕೆಯ ಪ್ರಕ್ರಿಯೆ ಕೊನೆಗೊಂಡಿದೆ. 34 ಶಾಸಕರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ನೇಮಕಗೊಂಡಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಲ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿಲ್ಲ. ಅದರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ಸಿಗದ ಪ್ರಮುಖ ಶಾಸಕರು ಈಗ ನಿಗಮ ಹಾಗೂ ಮಂಡಳಿಗಳ ಮುಖ್ಯಸ್ಥರ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ವಿಶೇಷವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಈಗ ಮತ್ತೊಂದು ಒಳಬೇಗುದಿ ಎದುರಿಸಬೇಕಾಗಿ ಬಂದಿದೆ.

ಈಗಾಗಲೇ ಲಾಬಿ ಆರಂಭವಾಗಿದ್ದು, ಅವಕಾಶ ಕೈತಪ್ಪಿದ ಸಚಿವ ಸ್ಥಾನದ ಆಕಾಂಕ್ಷಿಗಳು ಮಹತ್ವದ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಟಿ.ಬಿ.ಜಯಚಂದ್ರ, ಹ್ಯಾರಿಸ್ ನಲಪಾಡ್ ಮತ್ತು ಪ್ರಿಯಾಕೃಷ್ಣ ಅವರು ಈ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ.
ಜಯಚಂದ್ರ ಅವರು ಭಾನುವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲಿಗರ ತೀವ್ರ ಲಾಬಿ ನಡುವೆಯೂ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಹಿರಿಯ ಶಾಸಕ ಜಯಚಂದ್ರ ಅವರಿಗೆ ಮಂತ್ರಿ ಸ್ಥಾನ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬಿಡಿಎ ಅಧ್ಯಕ್ಷ ಗಾದಿಗೆ ಕಣ್ಣಿಟ್ಟಿದ್ದಾರೆ. ಆದರೆ, ಬೆಂಗಳೂರಿನ ಕೆಲ ಸ್ಥಳೀಯ ಶಾಸಕರಿಂದ ಜಯಚಂದ್ರ ಅವರು ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ಜಯಚಂದ್ರ ಅವರು ಕಠಿಣ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹುದ್ದೆಗೂ ಜಯಚಂದ್ರ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹುದ್ದೆಯು ಕ್ಯಾಬಿನೆಟ್ ದರ್ಜೆಯದ್ದಾಗಿದ್ದು, ರಾಜ್ಯ ಮತ್ತು ಕೇಂದ್ರದ ನಡುವಿನ ಅಂತರವನ್ನು ಕಡಿಮೆ ಮಾಡಲು ರಚಿಸಲಾಗಿದೆ.
ಜಯಚಂದ್ರ ಅವರಲ್ಲದೆ, ಬೆಂಗಳೂರಿನ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಕೂಡ ಬಿಡಿಎ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದ ಮತ್ತೊಬ್ಬ ಶಾಸಕ ಪ್ರಿಯಾ ಕೃಷ್ಣ ಕೂಡ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಅವರ ತಂದೆ ಹಾಗೂ ವಿಜಯನಗರ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಪಕ್ಷ ಅವರಿಗೆ ಸ್ಥಾನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮಗನ ಪರ ಎಂ.ಕೃಷ್ಣಪ್ಪ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಶಿವಾಜಿನಗರ ಶಾಸಕ ಮತ್ತು ಕಾಂಗ್ರೆಸ್‌ನ ಮುಸ್ಲಿಂ ನಾಯಕ ರಿಜ್ವಾನ್ ಅರ್ಷದ್ ಕೂಡ ಪ್ರತಿಷ್ಠಿತ ಹುದ್ದೆಯನ್ನು ಪಡೆಯಲು ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಚಿವ ಸ್ಥಾನವನ್ನು ನಿರಾಕರಿಸಿದ ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಜೂನ್‌ನಲ್ಲಿ ಮಂಡಳಿಗಳು ಮತ್ತು ನಿಗಮಗಳ ಮುಖ್ಯಸ್ಥರ ನೇಮಕವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಯಲಹಂಕ ಶಾಸಕ ಹಾಗೂ ಬಿಜೆಪಿ ಮುಖಂಡ ಎಸ್‌ಆರ್ ವಿಶ್ವನಾಥ್ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಈ ವರ್ಷದ ಆರಂಭದಲ್ಲಿ ಭ್ರಷ್ಟಾಚಾರದ ದೂರುಗಳ ನಂತರ ಲೋಕಾಯುಕ್ತರು ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.












Click it and Unblock the Notifications