₹400 ಕೋಟಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್!: ಯಾಕೆ?
ಬೆಂಗಳೂರು, ಅಕ್ಟೋಬರ್ 25: ಬಿಹಾರ ಚುನಾವಣೆಗೆ 400 ಕೋಟಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ ಸಚಿವರಿಗೆ ಇಲಾಖಾವಾರು ಕಪ್ಪವನ್ನು ನಿಗದಿಪಡಿಸಿದ್ದಾರೆ. ಹೀಗೆಂದು ಹೇಳಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯ (ಇಡಿ) ಸ್ವಯಂ ಪ್ರೇರಿತ ದೂರನ್ನು ದಾಖಲಿಸಿ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಹೌದು, ಬಿಹಾರ ಚುನಾವಣೆಗೆ ಇಂತಿಷ್ಟು ಕೋಟಿ ಹಣ ನೀಡುವಂತೆ ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಅದರ ಆಧಾರದಲ್ಲಿ ತನಿಖೆ ನಡೆಸುವಂತೆ ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಮೃತ್ಯುಂಜಯ ಎಕ್ಸ್ ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯಚಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.

ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರದ ವಿರೋಧಪಕ್ಷದ ನಾಯಕರ ಬಳಿ ನಿಖರವಾದಂತ ಮಾಹಿತಿ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇವರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ಈ ಬೃಹತ್ ಮೊತ್ತದ ಕನ್ನಡಿಗರ ತೆರಿಗೆ ಹಣವನ್ನು ಬಿಹಾರ ಚುನಾವಣೆಗಾಗಿ ಅಕ್ರಮವಾಗಿ ಹೇಗೆ ಸಾಗಣೆ ಮಾಡಿದ್ದಾರೆ. ಚುನಾವಣಾ ಅಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷವು ಬಳಸಿಕೊಳ್ಳುತ್ತಿರುವುದನ್ನು ಕೂಡಲೇ ಜಾರಿ ನಿರ್ದೇಶನಲಯ ಪತ್ತೆ ಹಚ್ಚಬೇಕು. ತಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅಶೋಕ್ ಮೃತ್ಯುಂಜಯ ಕೋರಿದ್ದಾರೆ.
ಮುಂದಿನ ಮಂತ್ರಿಮಂಡಲ ವಿಸ್ತರಣೆಗಾಗಿ ನೂರಾರು ಕೋಟಿ ರೂಪಾಯಿಗಳ ಕಪ್ಪ ಕಾಣಿಕೆಗಳನ್ನು ಒಪ್ಪಿಸಬೇಕು ಎಂದು ಪದೇ ಪದೇ ಹೇಳುತ್ತಿರುವ ವಿರೋಧ ಪಕ್ಷದ ನಾಯಕನ ಹೇಳಿಕೆಯಲ್ಲಿ ಸಾಚಾತನ ಇಲ್ಲದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸ್ವತಹ ತಾವೇ ಮುಂದಾಗಿ ಇಡಿ ತನಿಖೆಗೆ ಒಪ್ಪಿಸಿ ರಾಜ್ಯದ ಜನತೆಗೆ ನೈಜ ಚಿತ್ರಣವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷವು ಮನವಿ ಮಾಡಿದೆ.
ಡಿಕೆಶಿ ದುರ್ವರ್ತನೆಯಿಂದ ಐಟಿ ಸಿಟಿ ಪಟ್ಟಕ್ಕೆ ಕುತ್ತು?
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಿಡಿ ಕಾರಿದ್ದಾರೆ. ಬೆಂಗಳೂರು ಸಿಲಿಕಾನ್ ನಗರ ವೆಂದು ಖ್ಯಾತಿಗೊಳ್ಳಲು ಇಲ್ಲಿನ ಐಟಿ ಉದ್ಯಮಿಗಳ ಕೊಡುಗೆ ಸಾಕಷ್ಟು ಮಟ್ಟದಲ್ಲಿದೆ. ದೇಶಕ್ಕೆ ಎರಡನೇ ಅತಿ ದೊಡ್ಡ ತೆರಿಗೆಯನ್ನು ನೀಡುವ ಹಾಗೂ ದೇಶದ ಆರ್ಥಿಕ ಇಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಐಟಿ ಉದ್ಯಮಗಳು, ಇಲ್ಲಿನ ಉದ್ಯೋಗಿಗಳು ಹಾಗೂ ಅವರಿಗೆ ಪೂರಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಕಂಪನಿಗಳು ಪ್ರಮುಖ ಕಾರಣವಾಗಿವೆ.
ಈ ಕನಿಷ್ಠ ಜ್ಞಾನವು ಇಲ್ಲದ ಬೆಂಗಳೂರು ನಗರಾಭಿವೃದ್ಧಿಯ ಹೊಣೆಯನ್ನು ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ದುರ್ವರ್ತನಕಾರಿ ಹೇಳಿಕೆಗಳಿಂದಾಗಿ ಏಷ್ಯಾದ ಅತಿ ದೊಡ್ಡ ಹೂಡಿಕೆಯಾದ ಗೂಗಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆಯ ಡೇಟಾ ಮೈನಿಂಗ್ ಕೇಂದ್ರವು ವಿಶಾಖಪಟ್ಟಣದ ಪಾಲಾಗಿದೆ. ಈ ರೀತಿಯ ನಡೆಯಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವುದು ನಿಸ್ಸಂದೇಹವೆಂದು ಕಳವಳ ವ್ಯಕ್ತಪಡಿಸಿದರು.
"ಕಳೆದೆರಡು ದಶಕಗಳಿಂದ ಆಳಿರುವ ಮೂರೂ ಪಕ್ಷಗಳು ಬೆಂಗಳೂರಿಗರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಲು ವಿಫಲವಾಗಿವೆ. ಬೆಂಗಳೂರಿನ ಮೂಲಭೂತ ಸೌಕರ್ಯದ ನೆಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಕೊಳ್ಳೆಹೊಡೆಯುವ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪ ಮಾಡಿಕೊಂಡೆ ಬಂದ ಕಾಂಗ್ರೆಸ್ ಪಕ್ಷವು ಸಹ ಯಾವುದೇ ತನಿಖೆಯನ್ನು ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡುವುದನ್ನು ಬಿಟ್ಟು ತಾವೇ 60% ಕಮಿಷನ್ ದಂಧೆಗೆ ಇಳಿದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣಗಳಾಗಿವೆ ಎಂದು ಅವರು ಆರೋಪಿಸಿದರು.
ಡಿಕೆಶಿಯ ದುರಹಂಕಾರಿ ಹೇಳಿಕೆಗಳು ಇಲ್ಲಿನ ಐಟಿ ಉದ್ಯಮಿಗಳು ಬೆಂಗಳೂರನ್ನು ಬಿಡುವಂತೆ ಪ್ರಚೋದಿಸುತ್ತದೆ. ಉದ್ಯಮಿಗಳಿಗೆ ಪೂರಕವಾದಂತಹ ಉತ್ತಮ ರಸ್ತೆ, ನೀರು, ಒಳಚರಂಡಿ, ಸಂಚಾರ ವ್ಯವಸ್ಥೆಯಂತಹ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು ಪ್ರತಿದಿನವೂ ಈ ರೀತಿಯ ದುರಂಕಾರಿ ಮಾತುಗಳನ್ನು ಬೆಂಗಳೂರಿಗರು ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications