ಸಿದ್ದರಾಮಯ್ಯ ಸರ್ಕಾರ ಎಂದೂ ಪತನವಾಗಬಹುದು!
ಬೆಂಗಳೂರು, ಆ.4 : ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಬೇಕಾದರೂ ಪತನಗೊಳ್ಳಬಹುದು ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ವಿ.ಸದಾನಂದ ಗೌಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಇದು ಸರ್ಕಾರವನ್ನು ಪತನಗೊಳಿಸಲಿದೆ ಎಂದರು.

ಬೇಹುಗಾರಿಕೆ ನಡೆಸಲು ನೇಮಕ : ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರನ್ನು ರಾಜ್ಯದ ಗೃಹ ಸಚಿವರ ಸಲಹೆಗಾರರಾಗಿ ನೇಮಕ ಮಾಡಿರುವುದನ್ನು ಲೇವಡಿ ಮಾಡಿದ ಸದಾನಂದ ಗೌಡರು, ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಲ್ಲ, ಬದಲಾಗಿ ಸಚಿವರ ಬೇಹುಗಾರಿಕೆ ನಡೆಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಕಿದರು. [ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ನೇಮಕ]
ಪೊಲೀಸ್ ಇಲಾಖೆಯಲ್ಲಿ ಗೃಹ ಸಚಿವರ ಅಧೀನದಲ್ಲಿ ಕೆಲಸ ಮಾಡಿದ ಅಧಿಕಾರಿಯೊಬ್ಬರನ್ನು ಅದೇ ಗೃಹ ಸಚಿವರ ಸಲಹೆಗಾರರನ್ನಾಗಿ ನೇಮಕ ಮಾಡಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದ ಸದಾನಂದ ಗೌಡರು, ಸಲಹೆಗಾರರ ನೇಮಕವಾದ 15 ನಿಮಿಷಗಳಲ್ಲೇ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಬದಲಾವಣೆ ಆಗುತ್ತದೆ ಎಂದರೆ ಅವರ ಪಾತ್ರ ಏನು ಅನ್ನೋದು ಬಿಚ್ಚಿ ಹೇಳಬೇಕಾಗಿಲ್ಲ ಎಂದರು.
ಡಿನೋಟಿಫಿಕೇಶನ್ : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಸದಾನಂದ ಗೌಡರು, ನಾವೂ ಅಧಿಕಾರ ನಡೆಸಿದ್ದೇವೆ. ನ್ಯಾಯಾಂಗ ತನಿಖೆ ಹೇಗೆ ನಡೆಯುತ್ತೆ, ವರದಿ ಏನಾಗುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತು ಎಂದರು.
ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದಾರೆ ಪ್ರಕರಣದ ಬಗ್ಗೆ ಸದನದಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಬೇಕಿತ್ತು. ಬಿಜೆಪಿ ದಾಖಲೆ ಬಿಡುಗಡೆ ಮಾಡಿದ ಮೇಲೆ ತನಿಖೆಗೆ ಒಪ್ಪಿಸಿರುವುದು ನೋಡಿದರೆ ಅವರೊಬ್ಬ ಸಂಶಯಾಸ್ಪದ ವ್ಯಕ್ತಿ ಅನ್ನೋದು ಸಾಬೀತಾಗಿದೆ ಎಂದು ಟೀಕಿಸಿದರು.












Click it and Unblock the Notifications