Congress Manifresto 2023: ಮಹಾನ್ ಬೆಂಗಳೂರು ಸಂಸ್ಥಾನ, ಒಂದೇ ವೇದಿಕೆಯಡಿ ಒಳಚರಂಡಿ-ಸಾರಿಗೆ-ವಿದ್ಯುತ್, ಬೇರೆನು ಸಿಕ್ಕಿದೆ?
ಬೆಂಗಳೂರು, ಮೇ 02: ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭಾರಿ ಭರವಸೆಗಳನ್ನು ನೀಡಿವೆ. ಈ ಪೈಕಿ ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ನಿಂದಲೂ ಹಲವು ಭರವಸೆಗಳು ನಗರದ ಜನತೆಗೆ ಸಿಕ್ಕಿವೆ.
ಬೆಂಗಳೂರಿನಲ್ಲಿ ಸದಾ ಕಾಡುವ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಪರಿಹಾರ ಮತ್ತು ವಿದ್ಯುತ್, ಒಳಚರಂಡಿ, ವಸತಿ, ಸಾರಿಗೆ ಇವೆಲ್ಲ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸುವ ಯೋಜನೆಗಳು ಹಾಗೂ ನರಸಾಪುರವರೆಗೆ ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ ಹಲವು ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿವೆ.

ಕುಡಿಯುವ ನೀರು, ರಸ್ತೆ, ಸಾರಿಗೆ ಸೇರಿದಂತೆ ಹಲವು ಮೂಲ ಸೌಲಭ್ಯಗಳಿಗೆ ಕಾಂಗ್ರೆಸ್ ಪಕ್ಷ ಆದ್ಯತೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ಇವೆಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕೈ ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಗಳೂರಿಗೆ ಘೋಷಿಸಿದ ಅಂಶಗಳ ಮಾಹಿತಿ
* ಬಿಬಿಎಂಪಿ ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ ಮಾಡಲಾಗುವುದು. ಇದರಿಂದ ನೀರು ಸಬರರಾಜು, ಒಳಚರಂಡಿ, ಸಾರಿಗೆ, ವಸತಿ, ವಿದ್ಯುತ್ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರಲು ಕ್ರಮ ಕೈಗೊಳ್ಳಬಹುದಾಗಿದೆ. ಉತ್ತರ ದಕ್ಷಿಣ, ದಕ್ಷಿಣ-ಪೂರ್ವ ದೀರ್ಘ ಎತ್ತರಿಸಿದ ಮೇಲ್ಸೇತುವೆ ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣ ಮಾಡಲಾಗುವುದು.
* 'ಮಹಾನ್ ಬೆಂಗಳೂರು ಸಂಸ್ಥಾನ'- ಬೆಂಗಳೂರಿನ ಕಳೆದು ಹೋದ ವೈಭವವನ್ನು ಸಮರ್ಥ ಆಡಳಿತದ ಮೂಲಕ ಮರುಸ್ಥಾಪಿಸಲು ಕ್ರಮ. ಅದಕ್ಕಾಗಿ ವಿವಿಧ ಕ್ಷೇತ್ರಗಳ ತಜ್ಞರು, ಉದ್ಯಮಿಗಳು, ಪರಿಸರ ತಜ್ಞರು, ಆರ್ಥಿಕ ತಜ್ಞರನ್ನು ಒಳಗೊಂಡ ನಗರ ಅಡಳಿತ ವ್ಯವಸ್ಥೆ ರಚನೆ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ.

* ಎಲ್ಲಾ ನಿವಾಸಿಗಳ ಸುಸ್ಥಿರ ಮತ್ತು ಯೋಜನಾಬದ್ಧ ಬೆಂಗಳೂರಿಗಾಗಿ ಪರಿಷ್ಕೃತ 2042ರ ಸಮಗ್ರ ಯೋಜನೆ ಜಾರಿ.
* ನಗರದ ಮೂಲ ಸೌಲಭ್ಯಗಳ ಸುಧಾರಣೆ, ನಿರ್ವಹಣಿಗೆ ಏಕೀಕೃತ ವ್ಯವಸ್ಥೆ.
* ಜಿಎಂಆರ್‌ಡಿಎ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ.
* ಬಾಕಿ ಉಳಿದಿರುವ ಮೆಟ್ರೊ ಹಂತಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಮತ್ತು ಮುಂದಿನ 5 ವರ್ಷದೊಳಗೆ 3 ಮತ್ತು 4ನೇ ಹಂತದ ಯೋಜನೆಗಳ ಪೂರ್ಣಗೊಳಿಸಲು ಯತ್ನ. ತುಮಕೂರಿನ ವಸಂತ ನರಸಾಪುರದ ಕೈಗಾರಿಕಾ ಕೇಂದ್ರದವರೆಗೆ ಮೆಟ್ರೊ ರೈಲ್ವೆ ವಿಸ್ತರಣೆಗೆ ಕ್ರಮ.
* ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ವೈಜ್ಞಾನಿಕ ಯೋಜನೆ ಮತ್ತು ಕಸದಿಂದ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ತಗ್ಗಿಸಲು ಪ್ರತಿ ಹತ್ತು ವಾರ್ಡ್‌ಗಳಿಗೆ ತಲಾ ಒಂದರಂತೆ ತ್ಯಾಜ್ಯ ನಿರ್ವಹಣೆ ಮತ್ತು ಮರು ಸಂಸ್ಕರಣೆ ಘಟಕ ಸ್ಥಾಪನೆ.
* ನಗರದೆಲ್ಲೆಡೆ ಸಂಪರ್ಕ ಸಾಧ್ಯವಾಗಿಸಲು ಇ-ರಿಕ್ಷಾಗಳ ಅಳವಡಿಕೆ.
* ಬೆಂಗಳೂರಿನ ಕರೆಗಳ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ ತ್ವರಿತ ಕಾರ್ಯಕ್ರಮ ಜಾರಿ. ಮುಂದಿನ 5 ವರ್ಷಗಳಲ್ಲಿ ಜಲ ಕ್ರೀಡೆಗಾಗಿ ನೀಲ ನಕ್ಷೆ ತಯಾರಿ.
* ತ್ಯಾಜ್ಯ ನೀರನ್ನು ಸಂಸ್ಕೃರಿಸಿ ಶೇಕಡಾ 100 ರಷ್ಟು ಪೂರೈಕೆ ಹಾಗೂ ಕುಡಿಯಲು ಹೊರತಾದ ಇತರ ಬಳಕೆಗೆ ಮರು ಬಳಕೆಯ ನೀರು ಪೂರೈಕೆಗೆ ಕ್ರಮ.
* ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಕೇಂದ್ರ ನಿರ್ಮಾಣ ಮಾಡಲಾಗುವುದು.












Click it and Unblock the Notifications