ಕಾಂಗ್ರೆಸ್ ಕಾರ್ಪೋರೇಟರ್ ದರ್ಪ, ದೇವಸ್ಥಾನದ ತಡೆಗೋಡೆ ಧ್ವಂಸ
ಬೆಂಗಳೂರು, ಜೂನ್ 24: ದೇವಸ್ಥಾನದ ಬೇಲಿ, ತಡೆಗೋಡೆ ಹಾಗೂ ದೇವಾಲಯ ಆವರಣದಲ್ಲಿ ನಿರ್ಮಿಸಲಾಗಿದ್ದ ನೀರಿನ ತೊಟ್ಟಿಯನ್ನು ಕಾಂಗ್ರೆಸ್ ಕಾರ್ಪೋರೇಟರ್ ಪತಿಯ ಸಹೋದರ ಹಾಗೂ ಆತನ ಮಗ ಸೇರಿ ಧ್ವಂಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Recommended Video
ಮಂಗಮ್ಮನಪಾಳ್ಯ ವಾರ್ಡ್ (190 ವಾರ್ಡ್) ವ್ಯಾಪ್ತಿಯಲ್ಲಿ ಬರುವ ಬಂಡೇಪಾಳ್ಯ ಗ್ರಾಮದಲ್ಲಿರುವ ಗಂಗಾಧರ ಸ್ವಾಮಿ ದೇವಸ್ಥಾನಕ್ಕೆ ನಿರ್ಮಿಸಲಾಗಿದ್ದ ತಂತಿ ಬೇಲಿ, ತಡೆಗೋಡೆ ಹಾಗೂ ನೀರಿನ ತೊಟ್ಟಿಯನ್ನು ಜೆಸಿಬಿ ಮೂಲಕ ಕೆಡವಲಾಗಿದೆ. ದೇವಸ್ಥಾನವನ್ನು ಸಹ ತೆರವುಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡ ತ್ಯಾಗರಾಜ ಮತ್ತು ಆತನ ಮಗ ಚೇತನ್ ಗೌಡ ಬೆದರಿಕೆ ಹಾಕಿದ್ದಾರೆ ಎಂದು ದೇವಸ್ಥಾನದ ಪದಾಧಿಕಾರಿಗಳು ಆರೋಪಿಸಿದ್ದಾರೆ.
''ಮಧ್ಯಾಹ್ನದ ವೇಳೆ ಜೆಸಿಬಿ ಕರೆದುಕೊಂಡು ಬಂದ ತ್ಯಾಗರಾಜ ಮತ್ತು ಆತನ ಮಗ ಚೇತನ್ ಏಕಾಏಕಿ ದೇವಸ್ಥಾನದ ಬೇಲಿಗಳನ್ನು ಕಿತ್ತು ಹಾಕಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ನಮಗೆ ಅವರ ಬೆಂಬಲಿಗರು ಧಮ್ಕಿ ಹಾಕಿದ್ದಾರೆ'' ಎಂದು ಸ್ಥಳೀಯರೊಬ್ಬರು ಒನ್ ಇಂಡಿಯಾಗೆ ತಿಳಿಸಿದ್ದಾರೆ.

''ದೇವಸ್ಥಾನ ಇರುವುದು ಸರ್ಕಾರಿ ಜಾಗದಲ್ಲಿ. ಸುಮಾರು 20 ವರ್ಷದಿಂದ ದೇವಸ್ಥಾನ ಇದೆ. ಆದರೆ, ತ್ಯಾಗರಾಜ್, ಜಗದೀಶ್ ಗೌಡ ಹಾಗೂ ಅವರ ಕುಟುಂಬ ಇದು ನಮ್ಮ ಖಾಸಗಿ ಸ್ವತ್ತು ಎಂದು ಜಾಗ ಕಬಳಿಸುವ ಪ್ರಯತ್ನ ಮಾಡ್ತಿದ್ದಾರೆ. ದೇವಸ್ಥಾನದ ಪಕ್ಕದಲ್ಲಿ ಕೆರೆ ಜಾಗ ಇದೆ. ಅದರ ಮೇಲೂ ಕೇಸ್ ಹಾಕಿಕೊಂಡಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲ, ಆದರೂ ಕಾರ್ಪೋರೇಟರ್ ಬೆಂಬಲದಿಂದ ದೌರ್ಜನ್ಯ ಮಾಡ್ತಿದ್ದಾರೆ'' ಎಂದು ದೇವಸ್ಥಾನದ ಟ್ರಸ್ಟಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೇವಸ್ಥಾನದ ಪದಾಧಿಕಾರಿಗಳು ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲವು ದಿನಗಳ ಹಿಂದೆ ಹೊಸೂರು ರಸ್ತೆಯ ಗಾರ್ವೆಭಾವಿ ಪಾಳ್ಯದಲ್ಲಿ ಮೆಟ್ರೋ ಕಾಮಗಾರಿಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಹೆದ್ದಾರಿ ಪಕ್ಕದಲ್ಲಿದ್ದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು. ಈ ದೇವಸ್ಥಾನ ತೆರವುಗೊಳಿಸುವ ಸಂದರ್ಭದಲ್ಲಿ ಸ್ಥಳೀಯರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ, ಆಂಜನೇಯ ಸ್ವಾಮಿ ದೇವಸ್ಥಾನ ಎದುರಿನಲ್ಲಿರುವ ಗಂಗಾಧರ ಸ್ವಾಮಿ ದೇವಸ್ಥಾನ ಘಟನೆ ವರದಿಯಾಗಿದೆ.












Click it and Unblock the Notifications