ಯಶಸ್ವಿ ವ್ಯಕ್ತಿಯನ್ನ ಸಾವಿಗೆ ದೂಡಿದ ವ್ಯವಸ್ಥೆ ಬಗ್ಗೆ ದನಿ ಎತ್ತಬೇಕು: ಸಿಜೆ ರಾಯ್ ಸಾವಿಗೆ ರಂಗಸ್ವಾಮಿ ಮೂಕನಹಳ್ಳಿ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಸಿ.ಜೆ.ರಾಯ್ ಅವರ ಆತ್ಮಹತ್ಯೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕಾನ್ಫಿಡೆಂಟ್ ಎನ್ನುವ ಉದ್ಯಮ ಲೋಕವನ್ನು ಹುಟ್ಟುಹಾಕಿದ ರಾಯ್ ಅವರೇ ಕಾನ್ಫಿಡೆನ್ಸ್ ಕಳೆದುಕೊಂಡಿದ್ದೇಕೆ ಎನ್ನುವ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಐಟಿ ಅಧಿಕಾರಿಗಳ ದಾಳಿ ಬೆನ್ನಲ್ಲೇ ರಾಯ್ ಅವರ ಆತ್ಮಹತ್ಯೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಬಗ್ಗೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು ಯಶಸ್ವಿ ವ್ಯಕ್ತಿಯನ್ನು ಸಾವಿಗೆ ದೂಡಿದ ವ್ಯವಸ್ಥೆಯ ಬಗ್ಗೆ ದನಿ ಎತ್ತಬೇಕಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
'ಒಬ್ಬ ಉದ್ಯಮಿಯಾಗುವುದು ಭಾರತದಲ್ಲಿ ದೊಡ್ಡ ಕಷ್ಟ. ಆರಂಭದ ಹಂತದಲ್ಲಿ, ಸೋಲುವ ದಿನಗಳಲ್ಲಿ 'ಬೇಕಿತ್ತಾ ನಿನಗೆ?', 'ನಾನೇಳಿದ್ದೆ ಬೇಡ ಅಂತ' ಎಂದು ಮೂದಲಿಸುವ ಸಮಾಜ, ಗೆದ್ದು ಹಣವಂತರಾದರೆ ಸಾಕು 'ಲೂಟಿ ಹೊಡೆದಿದ್ದಾನೆ 'ಅವನಿಗೇನು ಕಮ್ಮ? ಎನ್ನಲು ಶುರು ಮಾಡುತ್ತೆ. ಅನ್ಯ ಮಾರ್ಗದಿಂದ ಮಾತ್ರ ಶ್ರೀಮಂತರಾಗಲು ಸಾಧ್ಯ ಎಂದು ಸಮಾಜ ಷರಾ ಹೊರೆಡಿಸಿ ಬಿಡುತ್ತೆ'.

'ಉದ್ಯಮ ಜಗತ್ತಿನ ಸಾವಿರ ಸವಾಲು ಮೈಮೇಲೆ ಎಳೆದುಕೊಂಡು ಹೋರಾಡುವ ಉದ್ಯಮಿಯನ್ನು ಆತನ ಸಹೋದ್ಯೋಗಿಗಳೇ ಗೌರವಿಸುವುದಿಲ್ಲ. ಕೆಲಸ ನಾವು ಮಾಡುತ್ತೇವೆ, ಲಾಭ ಆತ ಮಾಡಿಕೊಳ್ಳುತ್ತಾನೆ ಎನ್ನುವ ಮಾತು ತೀರಾ ಸಾಮಾನ್ಯ. ಆತ ತೆಗೆದುಕೊಳ್ಳುವ ರಿಸ್ಕ್‌ನ ಸಾವಿರದ ಒಂದು ಭಾಗ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಜನ ಆತನ ಲಾಭದ ಬಗ್ಗೆ ಮಾತಾಡುತ್ತಾರೆ'.
'ಧ್ವನಿ ಎತ್ತುವುದಾದರೆ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ'
'ಇನ್ನು ನಮ್ಮ ಸರಕಾರಗಳು ಉದ್ಯಮಕ್ಕೆ ಬೇಕಾದ ಏಕೋ ಸಿಸ್ಟಮ್ ಕಟ್ಟಿದ್ದಾರೆಯೇ? ಸರಕಾರಗಳಿಗೆ ಉದ್ಯಮ ಲಾಭ ಮಾಡಲಿ ಅಥವಾ ಬಿಡಲಿ ತೆರಿಗೆ ಸಂಗ್ರಹವಾಗುತ್ತಿರಬೇಕು ಅಷ್ಟೇ. ಒಬ್ಬ ಉದ್ಯಮಿ ಈ ರೀತಿ ಜೀವನ ಅಂತ್ಯ ಮಾಡಿ ಕೊಂಡರೆ ತಲೆಗೊಂದು ಮಾತಾಡುವ ಸಮಾಜ ಒಂದು ವಿಚಾರ ಗಮನಿಸಿವುದಿಲ್ಲ. ಅದೆಂತಹ ಸಂಕಷ್ಟ, ದಾರುಣ ಪರಿಸ್ಥಿತಿ ಆತನಿಗೆ ಎದುರಾಗಿರಬೇಕು ಅಲ್ವಾ? ಹೇಡಿ, ಆತ್ಮಹತ್ಯೆ ಪರಿಹಾರವಲ್ಲ ಎಂದು ಬದಬಡಿಸುವ ಮುನ್ನ ಅಂತಹ ಯಶಸ್ವಿ ವ್ಯಕ್ತಿಯನ್ನು ಅಂತಹ ಪರಿಸ್ಥಿತಿಗೆ ದೂಡಿದ ನಮ್ಮ ವ್ಯವಸ್ಥೆ ಬಗ್ಗೆ ಬಡಬಡಿಸಿ ಪ್ಲೀಸ್. ಧ್ವನಿ ಎತ್ತುವುದಾದರೆ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ವ್ಯಕ್ತಿಯ ವೈಯಕ್ತಿಕತೆ ಬಗ್ಗೆಯಲ್ಲ ಪ್ಲೀಸ್'.
'ರಂಗಾ, ಈ ದೇಶದಲ್ಲಿ ನಾವು ಬಿಸಿನೆಸ್ ಮಾಡುವುದು ಬ್ಯಾಂಕಿನ ಬಡ್ಡಿ, ಸರಕಾರಕ್ಕೆ ತೆರಿಗೆ, ಎಂಪ್ಲೋಯೀಸ್ ಸ್ಯಾಲರಿ ಕೊಡಲು ಕಣೋ, ಉಳಿದಂತೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ ಎನ್ನುವ ಉದ್ಯಮಿ ಗೆಳೆಯರ ಮಾತಿನ ಜೊತೆಗೆ ಬಾಲವೇ ದೇಹ ಅಲ್ಲಾಡಿಸುವ ವ್ಯವಸ್ಥೆ ಕಂಡಿದ್ದೇನೆ. ಹೀಗಾಗಿ ಉದ್ಯಮಿಗಳ ಬಗ್ಗೆ ಕನಿಕರವಿರಲಿ. ರೈತ, ಸೈನಿಕರ ನಂತರ ಭಾರತದ ಬೆನ್ನೆಲುಬು ಉದ್ಯಮಿಗಳು. ಬೇರೆ ಲೋಕದಲ್ಲಿ ನಿಮಗೆ ನೆಮ್ಮದಿ ಸಿಗಲಿ ಓಂ ಶಾಂತಿ, ಸದ್ಗತಿ ಎಂದು ಸಂತಾಪ ಸೂಚಿಸಿರುವ ಅವರು, ಆತ್ಮಹತ್ಯೆ ಮಹಾಪಾಪ ಎನ್ನುವವರು ದೂರವಿರಿ ಪ್ಲೀಸ್. ಆತನನ್ನು ಅಂತಹ ಕೃತ್ಯಕ್ಕೆ ದೂಡಿದ ವ್ಯವಸ್ಥೆಯದ್ದು ಮಹಾಪಾಪ' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications