ಶಾಲೆಗಳಲ್ಲಿ ಮಾರ್ಗಸೂಚಿಗಳ ಬಗ್ಗೆ ಸಭೆ ಬಳಿಕ ತೀರ್ಮಾನ - ಬಸವರಾಜ ಬೊಮ್ಮಾಯಿ
ಬೆಂಗಳೂರು ಡಿಸೆಂಬರ್ 8: ವಸತಿ ಶಾಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಬೆನ್ನಲ್ಲೆ ನಾಳೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾರ್ಗಸೂಚಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಸತಿ ಶಾಲೆಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಜಿಲ್ಲೆಯಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಂಡುಬಂದಿದೆ. ಬೇರೆಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ನಾಳೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಧಿಕಾರಿಗಳು, ಸಚಿವರೊಂದಿಗೆ ಚರ್ಚೆ ಮಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದರು. "ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ತರುತ್ತೇವೆ. ಪೋಷಕರು ಅಥವಾ ಯಾರೂ ಕೂಡ ಆತಂಕ ಪಡುವ ಅಗತ್ಯತೆ ಇಲ್ಲ. ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಈಗಾಗಲೇ ಹೇಳಿದ್ದೇವೆ ಆ ಪ್ರಕಾರ ಜಾಗೃತಿ ವಹಿಸಿದರೆ ಸಾಕು. ನಾಳೆ ಸಭೆ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತವೆ' ಎಂದರು.
ವಾಸ್ತವಾಂಶ ಅಂದರೆ ರಾಜ್ಯ ಸರ್ಕಾರ ತನ್ನ ಹೇಳಿಕೆಯಲ್ಲಿ ಶಾಲೆಗಳಲ್ಲಿ ಸ್ಯಾನಿಟೈಸರ್, ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳುತ್ತದೆ. ಆದರೆ ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಮಾಡುವವರು ಯಾರು? ಎನ್ನುವ ಪ್ರಶ್ನೆ ಉದ್ಬವಿಸಿದೆ. ಅದೆಷ್ಟೋ ಶಾಲಾ-ಕಾಲೇಜುಗಳು ರಾಜ್ಯದಲ್ಲಿ ಆರಂಭಗೊಂಡಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಚತೆ ಕಾರ್ಯಕ್ಕೆ ಬೇಕಾದ ವಸ್ತುಗಳ ಖರೀದಿಗೆ ಹಾಗೂ ನಿತ್ಯ ಸ್ಯಾನಿಟೈಸರ್ ಖರೀದಿಗೆ ಬೇಕಾದ ಹಣದ ವ್ಯವಸ್ಥೆ ಮಾಡುವವರು ಯಾರು? ಕೊರೊನಾ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವ ಮೊದಲು ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೀಗ ಇದು ಶಾಲೆಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಕನಿಷ್ಠ ಸಂಪನ್ಮೂಲವಿರಬೇಕು. ಆದರೆ ಯಾವುದೇ ಆರ್ಥಿಕ ಸಾಹಾಯವಿಲ್ಲದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದರೆ ಶಾಲಾ ಉಮನ್ಯಾಸಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾದಂತ ಸ್ಥಿತಿ ಬಂದಿದೆ. ಇದು ಒಂದು ದಿನದ ಖರ್ಚಲ್ಲ. ನಿತ್ಯ ಈ ಖರ್ಚನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಉಪನ್ಯಾಸಕರಿಗೆ ಕಾಡುತ್ತಿದೆ.

ಇನ್ನೂ ಕೊರೊನಾ ಮೂರನೇ ಅಲೆ ಮಕ್ಕಳಿಗೆ ತಗುಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಲು, ಜಾಗೃತಿ ಮೂಡಿಸಲು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆಗೆ ಸಿದ್ದವಾಗಿದೆ. ಇದರೊಂದಿಗೆ ತಜ್ಞರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಹಲವಾರು ಸಲಹೆಗಳನ್ನು ನೀಡುತ್ತಾರೆ. ಡಾ. ನಿರಂಜನ್ ಆರಾಧ್ಯ ಹೇಳುವಂತೆ ಮಕ್ಕಳಿಗೆ ಕೊರೊನಾ ಹರಡದಂತೆ ನೋಡಿಕೊಳ್ಳುವುದರಲ್ಲಿ ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಮಾಜದ ಮಾತ್ರವೂ ಮುಖ್ಯವಾಗಿದೆ. ಅವರ ಪ್ರಕಾರ ಕೊರೊನಾ ಹರಡದಂತೆ ನೋಡಿಕೊಳ್ಳಲು ಗಮನಿಸಬೇಕಾದ ವಿಷಯಗಳು ಹೀಗಿವೆ-
ಶಾಲೆಯಲ್ಲಿ ನಿತ್ಯ ಸ್ವಚ್ಚತೆ
ಮಕ್ಕಳು ಹ್ಯಾಂಡ್ ಸ್ಯಾನಿಟೈಸರ್ ಮಾಡುತ್ತಿರುವ ಬಗ್ಗೆ ಗಮನ ಹರಿಸುವುದು
ಶಾಲೆಯಲ್ಲಿ ಮಕ್ಕಳು ಗುಂಪು ಸೇರದಂತೆ ನೋಡಿಕೊಳ್ಳುವುದು.
ಮಕ್ಕಳು ಮಾಸ್ಕ್ ಧರಿಸುವಂತೆ ಮುನ್ನಚ್ಚರಿಗೆ ನೀಡುವುದು
ಸಾರ್ವಜನಿಕ ವಲಯದಲ್ಲಿ ಗುಂಪು ಸೇರದಂತೆ ಗಮನಿಸಬೇಕು
ಆಟದ ಮೈದಾನದಲ್ಲಿ ಮಕ್ಕಳಿಗೆ ನಿಷೇಧ ಹೇರಬೇಕು
ಮಾರ್ಕೆಟ್‌ಗಳಲ್ಲಿ ಹೆಜ್ಜೆ ಇಡದಂತೆ ನೋಡಿಕೊಳ್ಳಬೇಕು
ಶಾಲೆಗೆ ಹೊರಗೂ ಕೊರೊನಾ ಹರಡುವುದು ಗಮನದಲ್ಲಿರಬೇಕು. ಹೀಗಾಗಿ ಶಾಲೆಯ ಹೊರಗೂ ಮಾರ್ಗಸೂಚಿ ಹೊರಡಿಸಬೇಕು
ಕೋಚಿಂಗ್ ಸೆಂಟರ್ ಟ್ಯುಟೋರಿಯಲ್ ಸದ್ಯಕ್ಕೆ ಬೇಡ
ಮಾಲ್, ಥಿಯೇಟರ್ ಹೋಗದಂತೆ ಬ್ರೇಕ್
ಇದರೊಂದಿಗೆ ಸರ್ಕಾರದ ಆದೇಶದಂತೆ ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಮಾಡಿಕೊಳ್ಳುವುದು ಅತ್ಯಾವಶ್ಯಕ. ಇದರಿಂದಿಗೆ ಶಿಕ್ಷಕರು ಮತ್ತು ಪೋಷಕರು ಎರಡು ಡೋಸ್ ಲಸಿಕೆ ಪಡೆದಿರುವುದು ಬಹುಮುಖ್ಯವಾಗಿದೆ. ಇವುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ತೀವ್ರ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಉತ್ತಮ ಮಾರ್ಗವಾಗಿದೆ ಎಂದು ಡಾ. ನಿರಂಜನ್ ಆರಾಧ್ಯ ಹೇಳುತ್ತಾರೆ.












Click it and Unblock the Notifications