Traffice Jam: HAL ಜಂಕ್ಷನ್ ರಸ್ತೆ ಅಂಡರ್‌ಪಾಸ್ ಬೇಗ ಪೂರ್ಣಗೊಳಿಸಿ
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಿನ ಎಚ್‌ಎಎಲ್ ಜಂಕ್ಷನ್ ಬಳಿ ಅಂಡರ್‌ಪಾಸ್ ನಿರ್ಮಾಣ ವಿಳಂಬ ಹಿನ್ನೆಲೆಯಲ್ಲಿ ಜನರು ಈ ಭಾಗದಲ್ಲಿ ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ಮುಂಗಾರು ಋತುವಿನಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ಸಮಸ್ಯೆ ಉಂಟಾಗಿದೆ. ಇತ್ತ ಎಚ್‌ಎಎಲ್ ಜಂಕ್ಷನ್ ಬಳಿ ಬಿಬಿಎಂಪಿ ನಿರ್ಮಿಸುತ್ತಿರುವ ರಸ್ತೆ ಅಂಡರ್‌ಪಾಸ್ ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ. ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಎಚ್‌ಎಎಲ್ ಜಂಕ್ಷನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವು ಜನ ನಿಬಿಡ ಪ್ರದೇಶವಾಗಿದೆ. ಇಲ್ಲಿ ಜನರಿಗೆ ಅನುಕೂಲವಾಗಲೆಂದು ರಸ್ತೆ ಅಂಡರ್‌ಪಾಸ್ ನಿರ್ಮಿಸಲಾಗುತ್ತಿತ್ತು. ಆದರೆ ಮೂರು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿತ್ಯ 40 ನಿಮಿಷಕ್ಕೂ ಹೆಚ್ಚು ಕಾಲ ಎಚ್‌ಎಎಲ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಕಚೇರಿ, ದೈನಂದಿನ ಕೆಲಸಗಳಿಗೆ ಈ ಮಾರ್ಗವಾಗಿ ಹೋಗುವುದು ಕಷ್ಟಕರವಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ನಿರಂತರ ಮಳೆಯಿಂದ ಈ ಭಾಗದ ರಸ್ತೆ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಎಲ್ಲೆಂದರಲ್ಲಿ ನೀರು ನಿಂತು ವಾಹನಗಳು ಸಂಚರಿಸಲು ಸ್ಥಳವಿಲ್ಲದಂತಾಗುತ್ತದೆ. ಸಾಮಾನ್ಯ ದಿನಗಳಲ್ಲಿ, ಜಂಕ್ಷನ್‌ನಲ್ಲಿ ಗಂಟೆಗಳ ಕಾಲ ಸಿಲುಕಿಕೊಳ್ಳುತ್ತೇವೆ. ಮಳೆ ಬಂದರೆ ಪರಿಸ್ಥಿತಿ ಶೋಚನೀಯವಾಗುತ್ತದೆ.
ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಮನವಿ; ಎಚ್‌ಎಎಲ್ ಗೇಟ್‌ನ ಎಡಭಾಗದಲ್ಲಿ ಕಾರು, ಬೈಕ್ ಸೇರಿದಂತೆ ಕಡಿಮೆ ಭಾರದ ವಾಹನಗಳ ಚಾಲನೆಗೆ ಅವಕಾಶ ನೀಡಿದರೆ ಇನ್ನೊಂದು ಬದಿಯಲ್ಲಿ ಬದಿಯ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಯಾಣಿಕರು ವಿವರಿಸಿದರು.

ಈ ಸಂಬಂಧ ಅನೇಕ ಸಲ ಬಿಬಿಎಂಪಿಗೆ ಮನವಿ ಮಾಡಿದರೂ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಯಾವ ಕ್ರಮ ಕೈಗೊಂಡಿಲ್ಲ. ನಾವು ಅಧಿಕಾರಿಗಳಿಗೆ ಸಾಕಷ್ಟು ಮನವಿಗಳನ್ನು ನೀಡಿದ್ದೇವೆ ಆದರೆ ಕೆಲಸ ಪ್ರಗತಿಯಲ್ಲಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶೀಘ್ರವೇ ಕಾಮಗಾರಿ ಮುಗಿಸಿ ಈ ಭಾಗದಲ್ಲಿನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೈಕ್ ಸವಾರರೊಬ್ಬರು ಒತ್ತಾಯಿಸಿದರು. ಈ ಕುರಿತು ಬಿಬಿಎಂಪಿ ಜನರಿಗೆ, ಮನವಿ ನೀಡಲು ಮುಂದಾದವರಿಗೆ ಕನಿಷ್ಠ ಸ್ಪಂದನೆ ಸಹ ದೊರೆತಿಲ್ಲ ಎನ್ನಲಾಗಿದೆ.












Click it and Unblock the Notifications