ಬಿಜೆಪಿಯಿಂದ ಸಾರಿಗೆ ಸಚಿವ ರೇವಣ್ಣ ವಿರುದ್ಧ ಲೋಕಾಯುಕ್ತಗೆ ದೂರು
ಬೆಂಗಳೂರು, ಮಾರ್ಚ್ 17: ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರ ವಿರುದ್ಧ ಲೋಕಾಯುಕ್ತ ಮತ್ತು ಎಸಿಬಿಗಳಲ್ಲಿ ದೂರು ದಾಖಲಾಗಿದೆ. ಸಾರಿಗೆ ಬಸ್‌ಗಳ ಖರೀದಿ ಮತ್ತು ನಿರ್ವಹಣೆ ಸಂಬಂಧ ಭಾರಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಚ್.ಎಂ.ರೇವಣ್ಣ ಅವರು ಸಾರಿಗೆ ಸಚಿವರಾದ ಬಳಿಕ ಬಸ್‌ಗಳ ಖರೀದಿ ಮತ್ತು ನಿರ್ವಹಣೆಗೆ 1,577 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಲಾಗಿದ್ದು, ಇದರಲ್ಲಿ ಭಾರೀ ಅವ್ಯಹಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಿಗೆ(ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್‌ಟಿಸಿ) ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ(ಎನ್‌ಇಕೆಆರ್‌ಟಿಸಿ) 970 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್‌ಗಳನ್ನು ಖರೀದಿಸಲಾಗಿದೆ. ಅವುಗಳ ದುರಸ್ತಿ ಮತ್ತು ನಿರ್ವಹಣೆಗೆ 607 ರೂಪಾಯಿ ಕೋಟಿ ವೆಚ್ಚವಾಗಿದೆ ಎಂದು ಲೆಕ್ಕ ತೋರಿಸಲಾಗಿದೆ ಈ ವ್ಯವಹಾರದಲ್ಲಿ ಕೋಟ್ಯಂತರ ಹಣ ಸಚಿವರ ಪಾಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೂ ದೂರು ನೀಡಲಾಗಿದ್ದು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು, ಕೆಎಸ್‍ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಅಶೋಕ್ ಆನಂದ್, ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬೊಮ್ಮಯ್ಯ ನಾಯಕ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ಬಸ್ ಖರೀದಿಯೇ ಆಗಿಲ್ಲ: ರೇವಣ್ಣ
ಆದರೆ ಈ ಆರೋಪಗಳೆಲ್ಲಾ ಸುಳ್ಳು ಎಂದು ಸಾರಾಸಗಟಾಗಿ ತಳ್ಳಿಹಾಕಿರುವ ಎಚ್.ಎಂ.ರೇವಣ್ಣ 'ನಾನು ಸಾರಿಗೆ ಸಚಿವನಾದ ಬಳಿಕ ಬಸ್ ಖರೀದಿಯೇ ಆಗಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ದೂರು ನೀಡಿರುವ ಬಿಜೆಪಿಯ ಎನ್.ಆರ್. ರಮೇಶ್ ಬಗ್ಗೆ ಹರಿಹಾಯ್ದ ಆವರು 'ಪ್ರಚಾರಕ್ಕಾಗಿ ಈ ರೀತಿಯ ಆರೋಪ ಮಾಡುವುದು ಎಚ್.ಆರ್.ರಮೇಶ್ ಅವರಿಗೆ ಚಟ' ಎಂದರು. ಅವರು ಮುಂಚಿನಿಂದಲೂ ಹೀಗೆ ಮಾಡುತ್ತಲೇ ಬಂದಿದ್ದಾರೆ ಆದರೆ ಈಗ ನನ್ನ ತಂಟೆಗೆ ಬಂದಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬುದ್ದಿ ಕಲಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
'ದೇಶದಲ್ಲೆ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಎಂಬ ಹೆಸರು ರಾಜ್ಯಕ್ಕೆ ಬಂದಿದೆ. ಆದರೆ ಬಿಜೆಪಿಯವರು ಕೆಎಸ್‌ಆರ್‌ಟಿಸಿ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಮಾರ್ಕೊಪೊಲೋ ಬಸ್ ಖರೀದಿ ಅವ್ಯವಹಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವುದರಿಂದ, ಸೇಡಿನ ಕ್ರಮವಾಗಿ ನನ್ನ ವಿರುದ್ಧ ಈ ಆರೋಪವನ್ನು ಮಾಡಿಸಿದ್ದಾರೆ' ಎಂದು ದೂರಿದರು.












Click it and Unblock the Notifications