CM ಸಿದ್ದರಾಮಯ್ಯರಿಂದ ಸಾವಿರಾರು ಕೋಟಿ ಹಣ ದುರ್ಬಳಕೆ: ಸಂಸದ
ಹುಬ್ಬಳ್ಳಿ, ಜುಲೈ 17: ವಾಲ್ಮೀಕಿ ನಿಗಮದ ಹಗರಣ ಕೇವಲ ಅದು ಹಗರಣ ಅಲ್ಲಾ ಅದೊಂದು ಹಗಲು ದರೋಡೆ. ಮುಡಾ ಹಗರಣದಲ್ಲಿಯೂ ಬಹಳ ತಪ್ಪು ಮಾಡಿದ್ದಾರೆ ವಾಲ್ಮೀಕಿ ನಿಗಮದ ಹಗರಣದಲ್ಲಿಯೂ ಬಹಳ ತಪ್ಪು ನಡೆದಿದೆ ಎಂದು ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸ್ಪಷ್ಟವಾಗಿದ್ದು ಇದರಲ್ಲಿ ಸಚಿವರು ತಪ್ಪು ಮಾಡಿದ್ದಾರೆ. ಇವೆರೆಡು ಪ್ರಕರಣ ನೋಡಿದರೆ ಬಹಳಷ್ಟು ತಪ್ಪುಗಳಾಗಿರುವುದು ಎದ್ದು ಕಾಣುತ್ತದೆ ಎಂದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ಧರೋಡೆಯೇ ಮಾಡಲಾಗಿದ್ದು, ಇದು ಸ್ಪಷ್ಟವಾಗಿದೆ. ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ಈ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು.
ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕು
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ತನಿಖೆ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಸಿಬಿಐ, ಇಡಿ, ಐಟಿ ಸಾಂವಿಧಾನಿಕ ಸಂಸ್ಥೆಗಳು ಆಗಿದ್ದು, ಅವು ತಮ್ಮ ಕೆಲಸ ಕಾರ್ಯ ಮಾಡುತ್ತಿವೆ. ಈಗಾಗಲೇ ತನಿಖೆ ಸಹ ನಡೆಯುತ್ತಿದೆ. ಸತ್ಯಾಸತ್ಯ ಹೊರಗೆ ಬರಬೇಕು ಎಂದು ಆಗ್ರಹಿಸಿದರು.
ಎಸ್ ಸಿ ಎಸ್ ಪಿ/ ಟಿಎಸ್ ಪಿ ಅನುದಾನ ದುರ್ಬಳಕೆ ವಿಚಾರ, ರಾಜ್ಯ ಸರ್ಕಾರ ಸಂವಿಧಾನ ವಿರುದ್ಧ ನಡೆದುಕೊಳ್ಳುತ್ತಿದೆ. ಸಮಾಜದಲ್ಲಿ ನೊಂದವರನ್ನ ವಿಶೇಷ ಕಾನೂನು ಮೂಲಕ ಮುಖ್ಯ ವಾಹಿನಿಗೆ ತರಬೇಕಾಗಿದೆ. ದಲಿತರಿಗೆ ಕೊಡಬೇಕಾದ ಅನುದಾನ ಕೊಟ್ಟು ಅವರಿಗೆ ಅನುಕೂಲ ಮಾಡಬೇಕು. ಅವರಿಗೆ ಶಿಕ್ಷಣ ಕೊಡಬೇಕು, ಉದ್ಯೋಗ ಕೊಡಬೇಕು ಉದ್ಯಮಗಳನ್ನಾಗಿ ಮಾಡಬೇಕು, ಭೂಮಿ ಖರೀದಿ ಮಾಡಬೇಕು, ಮನೆ ಖರೀದಿ ಮಾಡಬೇಕಿದೆ.
ಸಿದ್ದರಾಮಯ್ಯರಿಂದಲೇ ದಲಿತರಿಗೆ ಮೋಸ: ಕಾರಜೋಳ
ನೀರಾವರಿ ಸೌಲಭ್ಯ ಸ್ವಂತ ಜಮೀನುಗಳಿಗೆ ಕೊಡಬೇಕು ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರ ಸರ್ಕಾರ ಬಂದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಹೊಸ ಕಾನೂನು ತರಲಾಯಿತು. ಆ ಕಾನೂನು ಅನ್ವಯ ಅನುದಾನ ಹಂಚಿಕೆ ಮಾಡಿದ್ದರು.
ಆ ಮೀಸಲಾದ ಅನುದಾನ ದುರ್ಬಳಕೆ ಆಗುತ್ತಿದೆ. ಅನುದಾನ ಸೂಕ್ತ ಮಾಡುವುದು ಬಿಟ್ಟು, ಉಚಿತ ಬಸ್ ಪ್ರಯಾಣ ಕೊಟ್ಟರೆ ದಲಿತರ ಉದ್ಧಾರ ಆಗತ್ತದೆಯೇ ಎಂದು ಅವರು ಕಿಡಿ ಕಾರಿದರು. ಸಿದ್ದರಾಮಯ್ಯ ದಲಿತರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯರಿಂದ ಸಾವಿರಾರು ಕೋಟಿ ದುರಪಯೋಗ: ಲೆಕ್ಕ
ನಂತರ ಆ ಕಾನೂನು ಜಾರಿ ಮಾಡುವಾಗ ಸಹ ಸರಿಯಾದ ಚಿಂತನೆ ಸಿದ್ದರಾಮಯ್ಯ ಅವರಲ್ಲಿಲ್ಲ. ಕಳೆದ ವರ್ಷ ಸಹ ಸಿದ್ದರಾಮಯ್ಯ 11 ಸಾವಿರ 144 ಕೋಟಿ ದುರುಪಯೋಗ ಮಾಡಿಕೊಂಡರು. ಈ ವರ್ಷ ಸಹ 13 ಸಾವಿರ ಕೋಟಿ ದುರುಪಯೋಗ ಆಗಿದೆ. ಗ್ಯಾರಂಟಿ ಹೆಸರಿನಲ್ಲಿ ದುರುಪಯೋಗ ಆಗಿದ್ದು. ಒಟ್ಟು 25 ಸಾವಿರ ಕೋಟಿ ಹಣ ಎಸ್ ಸಿ ಎಸ್ ಟಿ ಹಣ ದುರುಪಯೋಗ ಆಗಿದೆ.
ಸಿದ್ದರಾಮಯ್ಯವರೇ ತಾವು ಅಹಿಂದ ನಾಯಕರೆಂದು ಪೆಟೆಂಟ್ ತೆಗೆದುಕೊಂಡಿದ್ದಿರಿ. ಈ ಮೂಲಕ ಹಿಂದುಳಿದವರನ್ನ ಉದ್ಧಾರ ಮಾಡುತ್ತೇವೆ ಎಂದು ಹೇಳಿದ್ದೀರಿ. ಈಗ ಪಟೆಂಟ್ ತೆಗೆದುಕೊಂಡು ಮನುಷ್ಯ 25 ಸಾವಿರ ಕೋಟಿ ಅನುದಾನ ವಾಪಾಸ್ ಕೊಡಿ ಅವರಿಗೆ ಭೂಮಿ, ಹಾಸ್ಟೆಲ್, ಸ್ವತಃ ಉದ್ಯೋಗ ಮಾಡಲು ಅನುದಾನ ಕೊಡಿ. ಇದು ಸರ್ಕಾರ ಮಾಡುವ ಕೆಲಸ ಮಾಡದೇ ಬಿಟ್ಟರೆ, ನೀವು ಮತ ಪಡೆದು ಮೋಸ ಮಾಡಿದಂತಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಂದ ಅಂಗನವಾಡಿಯಲ್ಲಿ ಎಲ್ ಕೆಜಿ ಆರಂಭ ವಿಚಾರ ಸಚಿವರೇ ಒಂದು ಕಡೆ ಹೊಸ ಶಿಕ್ಷಣ ನೀತಿ ವಿರೋಧ ಮಾಡುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯನ್ನು ನೀವು ವಿರೋಧಿಸಿದ್ದೀರಿ. ರಾಜ್ಯದ ಅಂಗನವಾಡಿಗಳಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲ ಎಂದು ಅವರು ತಿಳಿಸಿದರು.
ಸರ್ಕಾರ ಕೂಡಲೇ ಹೊಸ ಶಿಕ್ಷಣ ನೀತಿ ಜಾರಿ ತಂದು, ಮಕ್ಕಳಿಗೆ ಕೇವಲ ವೃತ್ತಿ ಆಧಾರಿತ ಶಿಕ್ಷಣ ಅಲ್ಲಾ ಇದೊಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಒಂದೇ ತರಹದ ಶಿಕ್ಷಣ ನೀತಿ ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications