ಚಾಮರಾಜಪೇಟೆಯಲ್ಲಿ ದನಗಳ ಕೆಚ್ಚಲು ಕತ್ತರಿಸಿ ವಿಕೃತಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆಯು ಸದ್ಯ ಸಂಚಲನ ಸೃಷ್ಟಿಸಿದೆ. ಇದು ಹಿಂದೂ ನಾಯಕರನ್ನು ಕೆರಳಿಸಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಸುಗಳ ಮೇಲೆ ನಡೆದ ವಿಕೃತ ಕೃತ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಪ್ರತಿಕ್ರಿಯಿಸಿದ್ದು, ಪ್ರಾಣಿ ಹಿಂಸೆ ಮಾಡುವುದು ಅಪರಾಧ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಖಂಡಿತ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿ ದನಗಳಿಗೆ ಹಿಂಸೆ ನೀಡಿರುವ ಘಟನೆ ಅತ್ಯಂತ ಅಮಾನವೀಯ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು. ಈವರೆಗೆ ಕೃತ್ಯ ಎಸಗಿದವರ ಮಾಹಿತಿ ನಮಗೆ ಸಿಕ್ಕಿಲ್ಲ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಕಮೀಷನರ್ ಅವರಿಗೆ ಸೂಚಿಸಿದ್ದೇನೆ. ಕಾನೂನು ತನ್ನ ಕಾರ್ಯ ಮಾಡುತ್ತಿರುವ ಹೊರತಾಗಿಯೂ ಹಿಂದೂ ಸಂಘಟನೆಗಳ ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಗುಡುಗಿದ್ದಾರೆ.

ಈ ಘಟನೆಯನ್ನು ಖಂಡಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಜಿಹಾದಿ ಮನಸ್ಥಿತಿಯ ದುರುಳರು ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದಾರೆ, ನಾವೆಂದೂ ಕಂಡು ಕೇಳರಿಯದ ಘಟನೆ ಇದಾಗಿದೆ. ಮಚ್ಚುಗಳನ್ನು ಉಪಯೋಗಿಸಿ ಹಸುಗಳ ಕೆಚ್ಚಲು ಕತ್ತರಿಸಿದ್ದಾರೆ. ಈ ಮೂಲಕ ಸಂಕ್ರಾಂತಿ ಹಬ್ಬದ ವೇಳೆ ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ಯಾವ ಸಂದೇಶ ರವಾನಿಸುತ್ತಿದೆ? ಹಿಂದುಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕೆಲ ಮತಾಂಧರು ಪ್ರತಿಭಟನೆಗೆ ಹಸುಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ನಿಜಕ್ಕೂ ಅಮಾನವೀಯ ಹಾಗೂ ರೋಗಗ್ರಸ್ಥ ಮನಃಸ್ಥಿತಿಯ ಪರಾಕಾಷ್ಠೆ. ಕೃತ್ಯವನ್ನು ಮಾಡಿದವರನ್ನು ಕೂಡಲೇ ಪತ್ತೆಹಚ್ಚಿ ಪೊಲೀಸರು ಜೈಲಿಗಟ್ಟಲಿ ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಮತಾಂಧರ ವಿಕೃತಿ ಹೆಚ್ಚಾಗುತ್ತಲೇ ಇದೆ. ಚಾಮರಾಜಪೇಟೆಯ ಪಶು ಆಸ್ಪತ್ರೆಯನ್ನು ಎತ್ತಂಗಡಿ ಮಾಡುವ ಸಂಚು ಸರ್ಕಾರ ಬಂದಾಗಿನಿಂದಲೂ ನಡೆಯುತ್ತಿದೆ. ಹೀಗಾಗಿಯೇ ಚಾಮರಾಜಪೇಟೆಯಲ್ಲಿ ಹಸುಗಳೇ ಇಲ್ಲದಂತೆ ಮಾಡಲು ಮತಾಂಧರಿಗೆ ಸುಪಾರಿ ಕೊಟ್ಟವರು ಯಾರು? ಈ ಕುರಿತು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ರಾಜ್ಯ ಬಿಜೆಪಿ ಕೂಡ ಎಕ್ಸ್‌ನಲ್ಲಿ ಆಗ್ರಹಿಸಿದೆ.
ಗೋ ಭಕ್ಷಕ ಜನರ ಓಲೈಕೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಮೊನ್ನೆಯಷ್ಟೇ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದೆ. ಇದೆಲ್ಲವೂ ಗೋ ಭಕ್ಷಕ ಜನರ ಓಲೈಕೆಗಾಗಿ ಅಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.

ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಕರ್ನಾಟಕದ ರಾಜಧಾನಿಯಲ್ಲೇ ನಡೆಯುತ್ತಿದೆ ಎಂದರೆ ಇದರ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ. ಕೃತ್ಯ ನಡೆದಿರುವ ಕ್ಷೇತ್ರ ಯಾರ ಮುಷ್ಠಿಯಲ್ಲಿದೆ? ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ದಿನದಿಂದ ದಿನಕ್ಕೆ ಹಿಂದೂ ಆಚಾರ-ವಿಚಾರ ಹಾಗೂ ಜನರ ಮೇಲೆ ನಡೆಯುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿಯದಿದ್ದರೆ, ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರು ಸರ್ಕಾರದೊಳಗಿನ ಶಕ್ತಿಗಳು ಎಂಬ ತೀರ್ಮಾನಕ್ಕೆ ಜನ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications