Bengaluru Sub Urban Rail: ರಾಜ್ಯ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ ಸಿಕ್ಕಿದ್ದೇನು? ಸಿಎಂ ಕೊಟ್ರು ಅಪ್ಡೇಟ್ಸ್
ಬೆಂಗಳೂರು, ಮಾರ್ಚ್ 07: ರಾಜ್ಯ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ಅನುದಾನ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಿದೆ. 50:50 ಅನುಪಾತದಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆ, ರೈಲ್ವೆ ಮೇಲ್ಸೇತುವೆ ಸೇರಿದಂತೆ ಅನದಾನ ಕುರಿತು ಸಿಎಂ ಕೊಟ್ಟ ಅಪ್ಡೇಟ್ ಮಾಹಿತಿ ಇಲ್ಲಿದೆ.
ಶುಕ್ರವಾರ ಮಾರ್ಚ್ 07ರಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಬೆಂಗಳೂರು ಉಪನಗರ ರೈಲ್ವೇ ಯೋಜನೆಯನ್ನು 15,767 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 58 ರೈಲ್ವೇ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿರುತ್ತದೆ. ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡ ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‌ಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರವು ರೈಲ್ವೆಯೊಂದಿಗೆ 50:50 ರ ಅನುಪಾತದಲ್ಲಿ 09 ರೈಲು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಏಳು ಯೋಜನೆಗಳ ಭೂಸ್ವಾಧೀನದ ಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಒಟ್ಟಾರೆ 16,235 ಕೋಟಿ ರೂ. ವೆಚ್ಚದ ಈ ಯೋಜನೆಗಳಿಗೆ ರಾಜ್ಯ ಸರ್ಕಾರದ ವತಿಯಿಂದ 9,847 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. 2025-26 ಆಯವ್ಯಯದಲ್ಲಿ 600 ಕೋಟಿ ರೂ. ಒದಗಿಸಲಾಗಿದೆ.
ರೈಲ್ವೇ ಲೆವೆಲ್ ಕ್ರಾಸಿಂಗ್ ಬದಲಾಗಿ ಹೊಸ ಯೋಜನೆ
ಬೆಂಗಳೂರಿನಲ್ಲಿ ಹೆಚ್ಚಿರುವ ವಾಹನ ದಟ್ಟಣೆಗಳ ಪ್ರದೇಶದಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಬದಲಿಗೆ ರಸ್ತೆ ಮೇಲ್ವೇತುವೆ ಅಥವಾಗ ಅಗತ್ಯತೆ ಅನುಗುಣವಾಗಿ ಕೆಳಸೇತುವೆ ನಿರ್ಮಿಸಲು ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 50 ಕೋಟಿ ರೂ. ಒದಗಿಸಲಾಗಿದೆ ಎಂದರು.
ನಗರದ ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಗಳಡಿಯಲ್ಲಿ 70 ಕಿ.ಮೀ ರೈಲ್ವೆ ಲೈನ್ ಗಳನ್ನು ದ್ವಿಪಥೀಕರಣಗೊಳಿಸಲು ಒಟ್ಟಾರೆ 812 ಕೋಟಿ ರೂ. ಅಂದಾಜಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವತಿಯಿಂದ 406 ಕೋಟಿ ರೂ. ಒದಗಿಸಲಾಗುತ್ತಿದೆ. ಸದರಿ ಎರಡು ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು.












Click it and Unblock the Notifications