ಮಲ್ಲೇಶ್ವರಂ ಸ್ಫೋಟ : ಗಾಯಾಳುವಿಗೆ ಸಿಎಂ ಪರಿಹಾರ
ಬೆಂಗಳೂರು, ನ. 12 : ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಲಿಶಾ ಅವರ ಚಿಕಿತ್ಸೆಗೆ ಸಿಎಂ ಸಿದ್ದರಾಮಯ್ಯ 1 ಲಕ್ಷ ರೂ.ಗಳ ಸಹಾಯಧನ ನೀಡಿದ್ದಾರೆ. ಮುಂದಿನ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆಪೋಷಕರೊಂದಿಗೆ ಆಗಮಿಸಿದ್ದ ಲಿಶಾ, ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಮನವಿಗೆ ತಕ್ಷಣ ಸ್ಪಂದಿಸಿದ ಸಿದ್ದರಾಮುಯ್ಯ 1 ಲಕ್ಷ ರೂ.ಗಳ ಪರಿಹಾರ ತಕ್ಷಣ ಬಿಡುಗಡೆ ಮಾಡುವಂತೆ ಅಧಿಕಾರಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿದ್ಯಾರ್ಥಿನಿ ಲಿಶಾಗೆ ಒಂದು ಲಕ್ಷ ರೂ. ಪರಿಹಾರ ನೀಡಿದ ಸಿಎಂ, ಲಿಶಾಳ ಆರೋಗ್ಯ ಸ್ಥಿತಿಯ ಬಗ್ಗೆ ವಿವರವಾಗಿ ಮಾಹಿತಿ ಪಡೆದರು. ಲಿಶಾಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಅದನ್ನು ಮಾಡಿಸುವಂತೆ ಪೋಷಕರಿಗೆ ಸೂಚಿಸಿದ ಅವರು, ಆ ವೆಚ್ಚವನ್ನು ಸರ್ಕಾವೇ ಭರಿಸಲಿದೆ ಎಂದು ಭರವಸೆ ನೀಡಿದ್ದರು.
ದ್ವಿತೀಯ ಪಿಯು ಪರೀಕ್ಷೆ ಮುಗಿಸಿ ಸಿಇಟಿ ಪರೀಕ್ಷೆಯ ಕೋಚಿಂಗ್‌ಗೆ ಹೋಗುತ್ತಿದ್ದ ಲಿಶಾ ಮತ್ತು ರಕ್ಷಿತಾ ವಿರಾಮದ ಅವಧಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ಮಲ್ಲೇಶ್ವರಂನಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟ ಸ್ಥಳದಿಂದ ಐದು ಅಡಿ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಾಜಿನ ಚೂರುಗಳು ಹೊಕ್ಕಿದ್ದರಿಂದ ಲಿಶಾ ಅವರ ಎಡಗಾಲಿಗೆ ತೀವ್ರವಾದ ಗಾಯವಾಗಿತ್ತು. (ಸ್ಫೋಟ: ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲೇ ಸಿಇಟಿ)
ರಕ್ಷಿತಾ ಕಾಲಿಗೂ ಗಾಜು ಮತ್ತು ಕಬ್ಬಿಣದ ಚೂರು ಹೊಕ್ಕಿದ್ದು, ಇಬ್ಬರಿಗೂ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆಸ್ಪತ್ರೆಯಿಂದಲೇ ಸಿಇಟಿ ಪರೀಕ್ಷೆ ಬರೆಯಲು ಅವರಿಗೆ ಅಂದಿನ ಬಿಜೆಪಿ ಸರ್ಕಾರ ವ್ಯವಸ್ಥೆ ಕಲ್ಪಿಸಿತ್ತು. ಇಬ್ಬರು ವಿದ್ಯಾರ್ಥಿನಿಯರು ಇಂಜಿನಿಯರಿಂಗ್ ಸೀಟು ಪಡೆದಿದ್ದರು. ಅಂದಿನ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಿತ್ತು. ಪರಿಹಾರ ನೀಡುವ ಸಂದರ್ಭದಲ್ಲೆ ಸರ್ಕಾರ ಅವಧಿ ಮುಗಿದು ಚುನಾವಣೆ ಎದುರಾಗಿತ್ತು.
ಮಲ್ಲೇಶ್ವರಂ ಬಾಂಬ್ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಕೆಲವು ದಿನಗಳ ಹಿಂದೆ 14 ಆರೋಪಿಗಳ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಬಾಂಬ್ ಸ್ಫೋಟದಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 18 ಜನರು ಗಾಯಗೊಂಡಿದ್ದರು ಮತ್ತು 23 ವಾಹನಗಳು ಹಾನಿಗೀಡಾಗಿದ್ದವು.












Click it and Unblock the Notifications