ಬೆಂಗಳೂರು ಅಭಿವೃದ್ಧಿಗೆ ವಿಶೇಷ ಸಭೆ ಕರೆದ ಮುಖ್ಯಮಂತ್ರಿ: ಬಿಬಿಎಂಪಿ ಚುನಾವಣೆಗೆ ತಾಲೀಮು?
ಬೆಂಗಳೂರು, ಜ.1: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ (ಬಿಬಿಎಂಪಿ) ಚುನಾವಣೆ ಘೋಷಿಸುವ ಕಾಲ ಸನ್ನಿಹಿತವಾಗಿದೆ.
ಕಳೆದ 15 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸೊರಗಿದ ಬಿಬಿಎಂಪಿಗೆ ಶೀಘ್ರವೇ ಚುನಾವಣೆ ಘೋಷಣೆಯಾಗುವ ಲಕ್ಷಣ ಕಾಣಿಸುತ್ತಿವೆ. ಈ ಸಂಬಂಧ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಚಲನವಲನಗಳು ಚುನಾವಣೆ ಘೋಷಣೆಯಾಗುವ ಸಾಧ್ಯತೆಯನ್ನು ದೃಢೀಕರಿಸುತ್ತಿವೆ.
25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಪೂರ್ಣಗೊಂಡಿದೆ. 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಈ ವಾರವಷ್ಟೇ ಪೂರ್ಣಗೊಂಡಿದೆ. ಈ ಮಧ್ಯೆ ಇನ್ನೂ ಬಿಬಿಎಂಪಿ ಹಾಗೂ ಜಿಲ್ಲಾ- ತಾಲ್ಲೂಕಾ ಪಂಚಾಯತ್ ಚುನಾವಣೆ ಬಾಕಿ ಇದೆ. ರಾಜ್ಯದ ರಾಜಧಾನಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಒಂದು ವರ್ಷ ಪೂರ್ಣಗೊಂಡಿದ್ದು, ಈ ನಿಟ್ಟಿನಲ್ಲಿ ಚುನಾವಣೆ ಘೋಷಿಸಬೆಕು ಎಂಬ ಅಭಿಪ್ರಾಯ ಎಲ್ಲ ಕಡೆಯಿಂದ ಕೇಳಿಬರುತ್ತಿದೆ.

ವಿಧಾನ ಪರಿಷತ್ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ತೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಚುನಾವಣೆಗಳಲ್ಲಿ ಅವರಿಗೆ ಹಿನ್ನಡೆಯೇ ಆಗಿದೆ. ಹೀಗಾಗಿ ಪ್ರತಿಷ್ಠಿತ ಬಿಬಿಎಂಪಿ ಚುನಾವಣೆಯಲ್ಲಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಅನಿವಾರ್ಯತೆ ಅವರಿಗೆ ಇದೆ. ಹೀಗಾಗಿ ನಗರಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ ಅಭಿವೃದ್ಧಿಗೆ ಸಭೆ ಕರೆದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಅಭಿವೃದ್ಧಿಗಾಗಿಯೇ ಜ.2ರಂದು ವಿಶೇಷ ಸಭೆಯೊಂದನ್ನು ಕರೆದಿದ್ದಾರೆ. ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಯ ಈ ಕಾಳಜಿ ಚುನಾವಣೆ ಸಮೀಪಿಸುತ್ತಿರುವುದನ್ನು ತೋರಿಸುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10ಕ್ಕೆ ಸಿಎಂ ಸಭೆ ನಡೆಸಲಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಿಂದ ವಿಡಿಯೋ ಸಂವಾದದ ಮೂಲಕ ಭಾಗವಹಿಸಲಿದ್ದಾರೆ.

ಬೆಂಗಳೂರಿನ ರಸ್ತೆಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಹಲವು ಬಾರಿ ಹೇಳಿಕೆ ನೀಡಿದರೂ ಇದುವರೆಗೂ ಕಾಮಗಾರಿ ನಡೆಯುತ್ತಿಲ್ಲ. ಬಹುತೇಕ ಕಡೆ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಆಗದೆ ಜನರು ಧೂಳಿನಲ್ಲಿಯೇ ಪ್ರತಿನಿತ್ಯ ಓಡಾಡುವಂತಾಗಿದೆ. ಇಂತಹ ಹಲವು ಸಮಸ್ಯೆಗಳು ನಗರವನ್ನು ಬಾಧಿಸುತ್ತಿದ್ದು, ಸಭೆಯಲ್ಲಿ ಏನು ನಿರ್ಣಯ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬೆಂಗಳೂರು ನಗರವಾಸಿಗಳನ್ನು ಮೆಚ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.
ಅಮಿತ್ ಷಾ ರಾಜ್ಯಕ್ಕೆ:
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ.7 ಮತ್ತು 8 ರಂದು ರಾಜ್ಯಕ್ಕೆ ಬರಲಿದ್ದಾರೆ. ಜ.8 ರಂದು ಬೆಂಗಳೂರಿಗೆ ಆಗಮಿಸುವ ಅವರು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ಜೊತೆಗೆ ವಿಶೇಷ ಸಭೆಯೊಂದನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಮುಂದೆ ಹೋಗಲು ಇದೇ ಕಾರಣ:
ಬಿಬಿಎಂಪಿಯಲ್ಲಿ ಹಿಂದಿನ ಆಡಳಿತದ ಅವಧಿ ಮುಕ್ತಾಯ ಆಗುತ್ತಿದ್ದಂತೆ ಚುನಾವಣೆ ಘೋಷಣೆ ಮಾಡಬೇಕಿತ್ತು. ಬಿಬಿಎಂಪಿ 2020 ಹೊಸ ಕಾಯ್ದೆ ರೂಪಿಸಬೇಕು ಎಂಬ ಕಾರಣ ನೀಡಿ ಸರ್ಕಾರ ಚುನಾವಣೆಯನ್ನು ಮುಂದೂಡಿತು. ಕಾಯ್ದೆ ರಚನೆ ಬಳಿಕ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದಾಗ ಪ್ರಸ್ತುತ ಇದ್ದ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಿ ಪುನರ್‌ವಿಂಗಡಣೆ ಮಾಡಬೇಕು ಎಂಬ ಸಬೂಬು ಹೇಳಿ ಮತ್ತೊಮ್ಮೆ ಚುನಾವಣೆ ಮುಂದೂಡಲಾಗಿತ್ತು. ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯವನ್ನು ಕೈಬಿಟ್ಟು ಹಳೆಯ 198 ವಾರ್ಡ್‌ಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲಿಯೇ ಚುನಾವಣೆ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಾಣುತ್ತಿದೆ.












Click it and Unblock the Notifications