ಇಡಿ-ಐಟಿ ದಾಳಿ ಆರೋಪ: ಕಪ್ಪು ಹಣ ಹೊರಬರುತ್ತೆ ಎಂದು ಕಾಂಗ್ರೆಸ್‌ನವರಿಗೆ ಭಯ: ಸಿಎಂ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 05: ಚುನಾವಣಾ ಆಯೋಗ, ಐಟಿ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು, ಯಾರು ಕಳ್ಳರಿದ್ದಾರೆ ಅವರನ್ನು ಮಾತ್ರ ಅಧಿಕಾರಿಗಳು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗ, ಐಟಿ ಅಧಿಕಾರಿಗಳಿಗೆ ಕಾಂಗ್ರೆಸ್ ನಾಯಕರು ಹೆದರುವುದು ಏಕೆ? ಎಂದು ಅವರು ಪ್ರಶ್ನಿಸಿದರು.

ಐಟಿ ಅಧಿಕಾರಿಗಳ ವಿರುದ್ಧ ಯಾಕೆ ಭಯ ಪಡಬೇಕು. ಕಾಂಗ್ರೆಸ್ ನವರು ಅವರು ಇಷ್ಟು ದಿನ ಅಕ್ರಮವಾಗಿ ಗಳಿಸಿರುವ ಕಪ್ಪು ಹಣ ಹೊರಗೆ ಬರುತ್ತದೆ ಎಂಬ ಭಯ ಇರುವ ಕಾರಣಕ್ಕೆ ಈ ರೀತಿಯ ತಂತ್ರ ಮಾಡುತ್ತಿದ್ದಾರೆ ಎಂದು ಅವರು ಗುಡುಗಿದರು.
ಅಧಿಕಾರಿಗಳ ಮೇಲೆ ಒತ್ತರ ತರುವ ತಂತ್ರ ಇದು:ಸಿಎಂ
ಸದ್ಯ ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಳೆದ ಮಾರ್ಚ್ 29ರಿಂದಲೇ ನೀತಿ ಸಂಹಿತಿ ಜಾರಿಯಾಗಿದೆ. ಚುನಾವಣಾ ಆಯೋಗ ಎಲ್ಲ ಪಕ್ಷದವರ ಮೇಲೆ ದಾಳಿ ಮಾಡಿ ನಗದು, ಮದ್ಯ, ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಳ್ಳುತ್ತಿದೆ. ನಿಷ್ಪಕ್ಷಪಾತವಾಗಿ ನಡೆಯುತ್ತಿರುವ ದಾಳಿಯನ್ನು ತಡೆಯಲು, ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಗೂ ಐಟಿ ಅಧಿಕಾರಿಗಳು ಇದ್ದಾರೆ. ಅವರು ಸ್ವತಂತ್ರವಾಗೇ ಕೆಲಸ ಮಾಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಕಾಂಗ್ರೆಸ್‌ನವರು ಬೆನ್ನು ಮುಟ್ಟಿಕೊಳ್ಳುತ್ತಿದ್ದಾರೆ.
ಚುನಾವಣಾ ಆಯೋಗಕ್ಕೂ ಬಿಜೆಪಿ ಸೋಲುವುದಕ್ಕೂ ಸಂಬಂಧವಿಲ್ಲ. ಮುಂಬರುತ್ತಿರುವ ವಿಧನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಸೋಲುವುದು ನಿಶ್ಚಿತ. ರಾಜ್ಯ ಬಿಜೆಪಿಗೆ ಗೆಲ್ಲುವ, ಜನರ ಆಶೀರ್ವಾದ ಪಡೆದು ಆತ್ಮವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ಭವಿಷ್ಯ ನುಡಿದರು.

ರಣದೀಪ್ ಸುರ್ಜೆವಾಲರಿಂದ ಐಟಿ ಇಡಿ ದಾಳಿ ಆರೋಪ
ಪ್ರಸ್ತಕ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಅಧಿಕೃತವಾಗಿ ಘೊಷಣೆ ಆಗಿದೆ. ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ (IT) ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಹೀಗೆಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ ಆಪಾದಿಸಿದ್ದಾರೆ.
ಏಕಕಾಲಕ್ಕೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಆದಷ್ಟು ಶೀಘ್ರದಲ್ಲೇ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ದಾಳಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಮೂಲಕ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು.
ಚುನಾವಣೆ ಸಂದರ್ಭಗಳಲ್ಲಿ ದಾಳಿಗಳು ನಡೆಯುತ್ತಿವೆ. ಈಗಾಗಲೇ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಲೆಂದೆ ಇಡಿ ಮತ್ತು ಐಟಿ ಸಂಸ್ಥೆಗಳು ಒಟ್ಟು ಸುಮಾರು 1500ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಬೆಂಗಳೂರಿನತ್ತ ತೆರಳುತ್ತಿದ್ದಾರೆ ಎಂದು ಅವರು ಹೇಳಿದ್ದರು. ಈ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನವರಿಗೆ ಭಯ ಏಕೆ?ಕಪ್ಪು ಹಣ ಹೊರಬರುತ್ತದೆ ಎಂದು ಭಯವೇ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications