ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ನನ್ನಲ್ಲಿ ದುಃಖ ತರಿಸಿದೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 14: ಬಿಜೆಪಿಯಲ್ಲಿ ಎರಡು ಹಂತದ ಪಟ್ಟಿ ಬಿಡುಗಡೆಯಾಗಿದೆ. ಇತ್ತ ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಈ ಮಧ್ಯೆ ಪಕ್ಷಾಂತರ, ಅಸಮಾಧಾನ, ಬಂಡಾಯವು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಗುರುವಾರವೇ ಘೋಷಿಸಿದಂತೆ ಲಕ್ಷ್ಮಣ ಸವದಿ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯೊಂದಿಗೆ, ನನ್ನೊಂದಿಗೆ ಉತ್ತಮ ಒಡನಾಟ ಹೊಂದಿದ್ದ ನಾಯಕ. ಇಂದು ಅವರು ಕಾಂಗ್ರೆಸ್ ಸೇರ್ಪಡೆಯು ನನ್ನಲ್ಲಿ ದುಃಖ ತರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಬಿಜೆಪಿ ತೊರೆಯುವ ಬಗ್ಗೆ ಅವರು ಗುರುವಾರವೇ ಘೋಷಣೆ ಮಾಡಿದ್ದರು. ಅದರಂತೆ ಇಂದು ಆ ಪಕ್ಷ ಸೇರ್ಪಡೆ ಆಗಿದ್ದಾರೆ. ಅವರಿಗೆ ಕಾಂಗ್ರೆಸ್‌ನಲ್ಲಿ ರಾಜಕೀಯ ಭವಿಷ್ಯ ಕಂಡಿದೆ. ಕಾಂಗ್ರೆಸ್‌ನಲ್ಲಿ 60 ಸೀಟಿಗೆ ನೀಲ್ಲುವರು ಯಾರು ಇಲ್ಲದಾಗಿದೆ. ಹೀಗಾಗಿ ಅವರು ಕೆಲವರನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಕೆಟ್ ಘೋಷಣೆ ಬೆನ್ನಲ್ಲೆ ಬಿಜೆಪಿ ನಾಯಕರ ಪಕ್ಷಾಂತರ, ಬಂಡಾಯ, ಅಸಮಾಧಾನ ಕುರಿತು ಕೇಳಿದ ಸುದ್ದಿಗಾರ ಪ್ರಶ್ನೆ ಉತ್ತರಿಸಿದ ಬೊಮ್ಮಾಯಿಯವರು, ಸಹಜವಾಗಿ ಆಡಳಿತ ಪಕ್ಷವೆಂದರೆ ಅಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಬಿಜೆಪಿಯಲ್ಲಿ ಕಾರ್ಯಕರ್ತರು ನಮ್ಮ ಪರವಾಗಿದ್ದಾರೆ. ಹೀಗಾಗಿ 2023ರ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೆಲವರು ಶಾಸಕರಾಗಬೇಕು ಎಂಬ ಉದ್ದೇಶದಿಂದ ನಮ್ಮ ಪಕ್ಷ ತೊರೆಯುತ್ತಿದ್ದಾರೆ. ರಾಜ್ಯದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದ ಅವರು, ಆದಷ್ಟು ಶೀಘ್ರವೇ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದುಡುಕು ನಿರ್ಧಾರ ತೆಗೆದುಕೊಳ್ಳದಂತೆ ಸಿಎಂ ಸಲಹೆ
ಅಥಣಿ ಕ್ಷೇತ್ರ ಟಿಕೆಟ್ ಕೈತಪ್ಪಿದ ತಕ್ಷಣವೇ ಸವದಿಯವರನ್ನು ಬಿಜೆಪಿಯ ಮುಖಂಡರು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿಕೊಂಡಿದ್ದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸವದಿ ಅವರಿಗೆ ಸಮಾಧಾನ ಮಾಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ತಮ್ಮ ಬೆಂಬಲಿಗರು ಕಾರ್ಯಕರ್ತರ ಜೊತೆಗೆ ಒಂದಷ್ಟು ಸಭೆ ನಡೆಸಿ ಸಾಧಕ ಬಾಧಕ ಕುರಿತು ಚರ್ಚಿಸಿದ್ದಾರೆ. ಬಳಿಕ ಬೆಳಗಾವಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಪಕ್ಷ ಸೇರ್ಪಡೆ ನಿರ್ಧಾರ ಘೋಷಿಸಿದ್ದಾರೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಸವದಿ ಆಕ್ರೋಶ
ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಧಾನಗೊಂಡು ಕಿಡಿ ಕಾರಿದ್ದರು. ಬಳಿಕ ಕಾಂಗ್ರೆಸ್ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಶುಕ್ರವಾರ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಇದಕ್ಕು ಮೊದಲು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸವದಿ ಭೇಟಿ ಮಾಡಿ ಕೆಲ ಹೊತ್ತು ಚರ್ಚಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಅಧಿಕೃತಗೊಳಿಸಿದರು.
ನಂತರದ ಹಂತದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಜೊತೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಲಕ್ಷ್ಮಣ್ ಸವದಿ ಅವರು ಬೆಂಗಳೂರಿನಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.












Click it and Unblock the Notifications