ಮೈಸೂರು ದಸರಾ ಉದ್ಘಾಟನೆಗೆ ಎಸ್.ಎಂ. ಕೃಷ್ಣರನ್ನು ಅಧಿಕೃತವಾಗಿ ಆಹ್ವಾನಿಸಿದ ಸಿಎಂ
ಬೆಂಗಳೂರು, ಅಕ್ಟೋಬರ್ 2: ಈ ಬಾರಿಯ ಮೈಸೂರು ದಸರಾ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
ಇಂದು (ಶನಿವಾರ) ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಎಸ್.ಎಂ. ಕೃಷ್ಣರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಮಾಜಿ ಸಿಎಂ ಎಸ್.ಎಂ. ಕೃಷ್ಣರವರ ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಎಸ್.ಟಿ. ಸೋಮಶೇಖರ್ ತೆರಳಿ ಆಹ್ವಾನ ಪತ್ರಿಕೆ ನೀಡಿದರು.

ಭೇಟಿ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಈ ಬಾರಿಯ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಿಗೆ ಆಹ್ವಾನ ನೀಡಿದ್ದೇವೆ. ಎಸ್ಎಂಕೆ ಒಬ್ಬ ಮುತ್ಸದ್ದಿ ರಾಜಕಾರಣಿ, ಕನ್ನಡಿಗರಿಗೆ ಇವರು ಪ್ರೀತಿಯ ವ್ಯಕ್ತಿ," ಎಂದು ಹೇಳಿದರು.
"ನಮಗೆಲ್ಲ ಆದರಣೀಯವಾಗಿರುವ ಎಸ್ಎಂಕೆಗೆ ದಸರಾ ಉದ್ಘಾಟನೆಯ ಆಮಂತ್ರಣ ಕೊಟ್ಟಿದ್ದು, ಅವರು ನಮ್ಮ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ," ಎಂದು ಸಿಎಂ ತಿಳಿಸಿದರು.

ನನ್ನ ಯೋಗ್ಯತೆಗೂ ಮೀರಿ ದಸರಾ ಉದ್ಘಾಟನೆ ಹೊಣೆ
ಸರ್ಕಾರದ ಅಧಿಕೃತ ಆಹ್ವಾನ ಸ್ವೀಕರಿಸಿ ಬಳಿಕ ಮಾತನಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ, "ನನ್ನ ಯೋಗ್ಯತೆಗೂ ಮೀರಿ ದಸರಾ ಉದ್ಘಾಟನೆ ಹೊಣೆ ಹೊರೆಸಿದ್ದಾರೆ. ನನ್ನ ವ್ಯಕ್ತಿತ್ವದ ಪೋಷಣೆಗೆ, ವ್ಯಕ್ತಿತ್ವ ರೂಪಿಸಲು ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ," ಎಂದು ಸ್ಮರಿಸಿದರು.
"ದಸರಾ ಉದ್ಘಾಟನೆಯ ಸುಯೋಗ ನನಗೆ ನೀಡಿದ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ಇತ್ತೀಚೆಗೆ ತಾನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನನ್ನ ಸ್ನೇಹಿತ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟ ಬೊಮ್ಮಾಯಿವರಿಗೆ ನಾನು ಚಿರಋಣಿ," ಎಂದು ಎಸ್ಎಂಕೆ ಹೇಳಿದರು.
ಇದೇ ವೇಳೆ ಮೈಸೂರಿನಲ್ಲಿ ಶಿಕ್ಷಣ ಪಡೆದ ನೆನಪುಗಳನ್ನು ಸ್ಮರಿಸಿಕೊಂಡ ಎಸ್.ಎಂ. ಕೃಷ್ಣ, ಮಹಾರಾಜ ಕಾಲೇಜು, ಒಂಟಿಕೊಪ್ಪಲಿನಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು. ಮೈಸೂರು ಮತ್ತು ರಾಮಕೃಷ್ಣ ಆಶ್ರಮ ನನ್ನ ಏಳಿಗೆ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಎಸ್. ಎಂ. ಕೃಷ್ಣ ಪರಿಚಯ:
1932ರಲ್ಲಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಸಂಸದರಾದರು. ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್. ಎಂ. ಕೃಷ್ಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರು.
ಸಚಿವರಾಗಿ, 1989 ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. 1999-2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
2004- 2008ರ ತನಕ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
ಅಕ್ಟೋಬರ್ 7ರಂದು ದಸರಾ ಉದ್ಘಾಟನೆ
ಅಕ್ಟೋಬರ್ 7ರಿಂದ 15ರ ತನಕ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಸರಳವಾಗಿ ದಸರಾ ನಡೆಯಲಿದ್ದು, ಅಕ್ಟೋಬರ್ 15ರಂದು ಜಂಬೂ ಸವಾರಿ ಸಹ ಅರಮನೆ ಆವರಣದಲ್ಲಿ ಮಾತ್ರ ನಡೆಯಲಿದೆ.
ಅಕ್ಟೋಬರ್ 7ರಂದು ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ 2021ನೇ ಸಾಲಿನ ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ, ದಸರಾ ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ.
ಅಕ್ಟೋಬರ್ 15ರ ಸಂಜೆ 4.36 ರಿಂದ 4.44ರ ತನಕ ನಂದಿ ಪೂಜೆ ನಡೆಯಲಿದೆ. ಬಳಿಕ ಸಂಜೆ 5 ರಿಂದ 5.36ರ ತನಕ ಜಂಬೂ ಸವಾರಿ ನಡೆಯಲಿದೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ 8 ಆನೆಗಳು ಈಗಾಗಲೇ ಮೈಸೂರಿಗೆ ಆಗಮಿಸಿದ್ದು, ಅರಮನೆಯ ಆವರಣದಲ್ಲಿ ತಾಲೀಮು ನಡೆಸುತ್ತಿವೆ.












Click it and Unblock the Notifications