Bengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿ
ಬೆಂಗಳೂರು, ಡಿಸೆಂಬರ್ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಭಾನುವಾರದಿಂದ ಹಿಂಗಾರು ಮಳೆಯ ಸಿಂಚನ ಆರಂಭವಾಗಿದೆ. ಮುಂದಿನ 48 ಗಂಟೆ ನಗರದಲ್ಲಿ ಹಲವಾರು ಕಡೆಗಳಲ್ಲಿ ಹಗುರ ಮಳೆ ಸುರಿಯಲಿದೆ. ನಂತರ ಚಳಿ ಪ್ರಮಾಣದಲ್ಲಿ ಏರಿಕೆ ಆಗಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಇಡಿ ತುಂತುರು ಮಳೆ ಬಂದರೆ, ಕೆಲವೆಡೆ ಹಗುರ ಮಳೆ ಸುರಿಯಲಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ಈ ವೇಳೆ ತಾಪಮಾನ ಸಾಮಾನ್ಯ ಸ್ಥಿತಿಯಲ್ಲಿ ಅಂದರೆ ಕನಿಷ್ಠ 17-18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26-27 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ಮಳೆಯ ವಾತಾವರಣ ಕಡಿಮೆಯಾದ ನಂತರ ಬುಧವಾರ ಡಿಸೆಂಬರ್ 28ರಿಂದ ನಗರದಲ್ಲಿ ಚಳಿ ಪ್ರಮಾಣ ಕ್ರಮೇಣವಾಗಿ ಹೆಚ್ಚಾಗಲಿದೆ. ಸದ್ಯ ತಾತ್ಕಾಲಿಕವಾಗಿ ಮರೆಯಾಗಿದ್ದ ಮಂಜು ಮತ್ತೆ ಬೆಳಗಿನ ಜಾವ ಆವರಿಸಲಿದೆ. ಈ ವೇಳೆ ಕನಿಷ್ಠ ತಾಪಮಾನ 15ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಕೇಂದ್ರದ ವರದಿ ತಿಳಿಸಿದೆ.

ಭಾನುವಾರ ಸುರಿದ ಜಿಟಿ ಜಟಿ ಮಳೆ
ನಗರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಜೊತೆಗೆ ಸೋನೆ ಮಳೆ ಕಂಡು ಬಂತು. ಮಧ್ಯಾಹ್ನದ ನಂತರ ಮಳೆ ಇನ್ನಷ್ಟು ಚುರುಕು ಪಡೆದು ಬಹುತೇಕ ನಗರಾದ್ಯಂತ ಸುರಿಯಿತು. ವಿಜಯನಗರ, ಹಂಪಿನಗರ, ಆರ್‌ಆರ್‌ನಗರ, ಮಲ್ಲೇಶ್ವರಂ, ಜಯನಗರ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಅನೇಕ ಕಡೆಗಲ್ಲಿ ಹುಗುರ ಮಳೆ ದಾಖಲಾಯಿತು. ಇದು ವಾರಾಂತ್ಯಕ್ಕೆ ಸಂಜೆ ಮೋಜು, ಮಸ್ತಿ ಮಾಡಲು ಯೋಜಿಸಿದ್ದವರಿಗೆ ಅಡ್ಡಿಯಾಯಿತು. ಬೀದಿ ಬದಿ ವ್ಯಾಪಾರಕ್ಕೆ ಮತ್ತು ವಾಹನ ಸಂಚಾರಕ್ಕೆ ಕಿರಿಕಿರಿ ನೀಡಿತು.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತು ಏರ್ಪಟ್ಟಿದ್ದು, ಅದು ಭಾನುವಾರ ರಾತ್ರಿ ಶ್ರೀಲಂಕಾ ಕರಾವಳಿ ದಾಟಿದ್ದು, ಇಂದಿನಿಂದ (ಸೋಮವಾರ) ಪಶ್ಚಿಮ ದಿಕ್ಕಿನೆಡೆಗೆ ಸಾಗಿದೆ. ಇದರ ಪ್ರಭಾವದಿಂದ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಸುಮಾರು ನಾಲ್ಕು ದಿನ ಮಳೆ ಅಬ್ಬರ ಮತ್ತೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications