ಪ್ರೇಯಸಿಗಾಗಿ ಕಳ್ಳತನ ಮಾಡುತ್ತಿದ್ದ ಕ್ಲೀನರ್ ಸಿಕ್ಕಿಬಿದ್ದಿದ್ಹೇಗೆ?
ಬೆಂಗಳೂರು, ಜುಲೈ 26: ಪ್ರೇಯಸಿಗಾಗಿ ಕದಿಯುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಕ್ಲೀನರ್ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ತಾನು ಇಷ್ಟ ಪಟ್ಟಿದ್ದ ಪ್ರೇಯಸಿಗೆ ಹೊಸದೊಂದು ಮನೆ ಮಾಡಿ ಇರುವ ಉದ್ದೇಶದಿಂದ ಸರಗಳ್ಳತನಕ್ಕೆ ಇಳಿದಿದ್ದ ಹೋಟೆಲ್ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದ ರಾಜು ಬಂಧಿತ ಆರೋಪಿ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಮಹಿಳೆಯನ್ನು ರಾಜು ಇಷ್ಟಪಟ್ಟಿದ್ದ. ಪತಿ ಇಲ್ಲದ ಕಾರಣದಿಂದ ಆಕೆ ಆತನನ್ನು ಒಪ್ಪಿಕೊಂಡಿದ್ದಳು.

ತನ್ನನ್ನು ಕರೆದುಕೊಂಡು ಹೋಗಿ ಪ್ರತ್ಯೇಕ ಮನೆ ಮಾಡುವಂತೆ ಆ ಮಹಿಳೆ ಹೇಳಿದ್ದಳು. ಅದಕ್ಕಾಗಿ ಹಣ ಹೊಂದಿಸಲಾಗದೆ ಆತ ಸರಗಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಸರಗಳ್ಳತನ ಮಾಡುತ್ತಿದ್ದುದಲ್ಲದೆ, ಒಂಟಿಯಾಗಿ ನಡೆದು ಹೋಗುವವರ ಕೈಯಿಂದ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎನ್ನುವ ಸಂಗತಿಯೂ ವಿಚಾರಣೆ ವೇಳೆ ತಿಳಿದುಬಂದಿದೆ.
ರಾಜು ಬಳಿ ಬೈಕ್ ಕೂಡ ಇರಲಿಲಲ್. ಹೀಗಾಗಿ ಸರಗಳ್ಳತನಕ್ಕೆ ಇಳಿಯಲು ಮೊದಲಿಗೆ ಹೆದರಿದ್ದ, ಸರ ಕದ್ದು ಓಡುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬೀಳುವ ಆತಂಕವೂ ಇತ್ತು.
ಕೆಲ ಕಾಲ ಈತನಿಗೆ ಸಿಟಿ ಮಾರ್ಕೆಟ್ ಪ್ರದೇಶವೇ ಅನುಕೂಲವಂತೆ ಕಾಣಿಸಿತ್ತು. ಸಣ್ಣ ಪುಟ್ಟ ಗಲ್ಲಿಗಳಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ತಿಳಿದಿದ್ದ, ಕತ್ತಲಾಗುತ್ತಿದ್ದಂತೆ ತನ್ನ ಕಸುಬಿಗೆ ಇಳಿಯುತ್ತಿದ್ದ. ಆದರೆ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹೀಗೆ ಕದ್ದೋಡುವಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications